ಹೊಸ ವರ್ಷಾಚರಣೆ ಬದಲು ಕರ್ನಾಟಕದಲ್ಲಿ ‘ಡ್ರಗ್ಸ್ ಸೆಲೆಬ್ರೇಶನ್’ ನಡೆಯುತ್ತಿದೆ – ಆರ್. ಅಶೋಕ್
ಉಡುಪಿ: ಬೆಂಗಳೂರು ಡ್ರಗ್ಸ್ ಮಾಫಿಯಾ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಪತ್ತೆಹಚ್ಚಿರುವುದು ಕರ್ನಾಟಕ ಸರ್ಕಾರದ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದು ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯವನ್ನು ಡ್ರಗ್ಸ್ ಮಾಫಿಯಾ ಸಂಪೂರ್ಣವಾಗಿ ಸುತ್ತುವರೆದಿದ್ದರೂ ಈ ಸರ್ಕಾರ ಅದನ್ನು ತಡೆಯುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.

ಸೋಮವಾರ ಕಾಪುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹೊಸ ವರ್ಷಾಚರಣೆ ಬದಲಾಗಿ ಈ ಬಾರಿ ರಾಜ್ಯದಲ್ಲಿ ‘ಡ್ರಗ್ಸ್ ಸೆಲೆಬ್ರೇಶನ್’ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದ ಅಶೋಕ್, ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದು ನಮ್ಮ ಪೊಲೀಸರಿಗೆ ಯಾಕೆ ಗೊತ್ತಾಗಲಿಲ್ಲ? ಇದಕ್ಕಿಂತ ದೊಡ್ಡ ಅವಮಾನ ಏನಿದೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರ ಪೊಲೀಸರು ಎರಡು ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಇದಕ್ಕೆ ಸರ್ಕಾರ ನಾಚಿಕೆಪಡಬೇಕು. ಕರ್ನಾಟಕದಲ್ಲಿ ಇಂಟೆಲಿಜೆನ್ಸ್ ವ್ಯವಸ್ಥೆ ಸತ್ತಿಹೋಗಿದೆಯೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಪೊಲೀಸರ ಸಹಾಯ ಪಡೆದಿದ್ದೇವೆ ಎನ್ನುವ ಸರ್ಕಾರಕ್ಕೆ ಈ ಮಾಫಿಯಾ ಬಗ್ಗೆ ಮಾಹಿತಿ ಯಾಕೆ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗೃಹ ಸಚಿವರಿಗೆ ಸಾಮಾನ್ಯ ಬುದ್ಧಿಯೇ ಇಲ್ಲ ಎಂದು ಆರೋಪಿಸಿದ ಅವರು, ಇದು ಬೇಜವಾಬ್ದಾರಿ ಸರ್ಕಾರ ಎಂದು ಟೀಕಿಸಿದರು.
ಮಂಗಳೂರು ಮತ್ತು ಬೆಂಗಳೂರು ಜೈಲಿನಲ್ಲಿ ಡ್ರಗ್ ಪೆಡ್ಲರ್ಗಳು ತುಂಬಿದ್ದು, ಜೈಲುಗಳು ‘ಫೈವ್ ಸ್ಟಾರ್’ ಸೌಲಭ್ಯಗಳ ಕೇಂದ್ರಗಳಾಗಿವೆ ಎಂದು ಗಂಭೀರ ಆರೋಪ ಮಾಡಿದರು. ಜೈಲುಗಳಲ್ಲಿ ಡ್ರಗ್ಸ್, ಅಫೀಮ್, ಮದ್ಯ ಎಲ್ಲವೂ ಸಿಗುತ್ತಿದೆ. ಜೈಲುಗಳು ವೈನ್ ಫ್ಯಾಕ್ಟರಿ ಹಾಗೂ ಹಣ ವಸೂಲಿ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ಹೇಳಿದರು. ಪ್ರತಿದಿನ ಒಬ್ಬ ಕಾನ್ಸ್ಟೇಬಲ್ ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾನೆ ಎಂಬ ಆರೋಪವನ್ನೂ ಮಾಡಿದರು.
ಗೃಹ ಸಚಿವರು ಕಾಣೆಯಾಗಿದ್ದಾರೆ. ಏನು ಕೇಳಿದರೂ ‘ನೋಡೋಣ’, ‘ವರದಿ ಬಂದಿಲ್ಲ’ ಎನ್ನುವುದೇ ಉತ್ತರ ಎಂದು ಟೀಕಿಸಿದ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಜಗಳದಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು. ಇದು ಗಿಣಿ ಶಾಸ್ತ್ರದ ಸರ್ಕಾರವಾಗಿದ್ದು, ಅಧಿಕಾರ ಹಂಚಿಕೆ ಗಲಾಟೆಯಲ್ಲಿ ಸರ್ಕಾರ ಹಾಳಾಗುತ್ತಿದೆ ಎಂದರು.
ಕರ್ನಾಟಕಕ್ಕೆ 500ರಿಂದ 600 ಕೋಟಿ ರೂ. ಮೌಲ್ಯದ ಡ್ರಗ್ಸ್ ಬಂದಿದೆ. ಡ್ರಗ್ಸ್ ಹಂಚಿಕೆಯಲ್ಲಿ ಪೊಲೀಸರೂ ಶಾಮಿಲಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ವಿಲೇವಾರಿ ಆಗುತ್ತದೆ. ಈ ಸರ್ಕಾರಕ್ಕೆ ಇದನ್ನು ನಿಯಂತ್ರಿಸುವ ಧಮ್, ತಾಕತ್ತು ಇಲ್ಲ ಎಂದು ಕಿಡಿಕಾರಿದರು.
ಬೆಂಗಳೂರು ಕೋಗಿಲು ಲೇಔಟ್ ಕಾರ್ಯಾಚರಣೆ ಕುರಿತು ಟೀಕೆ
ಬೆಂಗಳೂರು ಕೋಗಿಲು ಲೇಔಟ್ ಕಾರ್ಯಾಚರಣೆ ವಿಚಾರದಲ್ಲೂ ಮಾತನಾಡಿದ ಅಶೋಕ್, ಕರ್ನಾಟಕ ಸರ್ಕಾರವನ್ನು ಯಾರು ರೂಲ್ ಮಾಡುತ್ತಿದ್ದಾರೆ? ಕೆ.ಸಿ. ವೇಣುಗೋಪಾಲ್ ಮಾಡ್ತಿದ್ದಾರಾ ಎಂದು ಪ್ರಶ್ನಿಸಿದರು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವೀಟ್ ಮಾಡುವುದು, ಕೇರಳದ ಜನಪ್ರತಿನಿಧಿಗಳ ನಿಯೋಗ ಬೆಂಗಳೂರಿಗೆ ಬರುವುದು ಸರ್ಕಾರದ ದುರ್ಬಲತೆಯನ್ನು ತೋರಿಸುತ್ತದೆ ಎಂದರು.
ನಮ್ಮ ನೆಲ-ಜಲ ವಿಚಾರದಲ್ಲಿ ಹೊರರಾಜ್ಯದವರು ಕಾಮೆಂಟ್ ಮಾಡುತ್ತಿದ್ದಾರೆ. ಕರ್ನಾಟಕವನ್ನು ಕೇರಳ ಸರ್ಕಾರವೇ ರೂಲ್ ಮಾಡ್ತಿದೆಯೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕದ ಭೂಮಿ ಬಗ್ಗೆ ಮಾತನಾಡಲು ಕೇರಳ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳಿದರು.
ಬಿಜೆಪಿ–ಜೆಡಿಎಸ್ ಮೈತ್ರಿ ಬಗ್ಗೆ ಸ್ಪಷ್ಟನೆ
ಬಿಜೆಪಿ ಮತ್ತು ಜೆಡಿಎಸ್ ಸಂಬಂಧ ಹಾಲು-ಜೇನು ತರ ಇದೆ. ಯಾರು ಹುಳಿ ಹಿಂಡೋದು ಬೇಡ ಎಂದು ಹೇಳಿದ ಅಶೋಕ್, ನಾವು ಎನ್ಡಿಎ ಪಾಲುದಾರರು. ನಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ. ಮುಂದಿನ ಚುನಾವಣೆಗಳಲ್ಲೂ ಜೆಡಿಎಸ್ ಜೊತೆ ಹೊಂದಾಣಿಕೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಅವರು ವರಿಷ್ಠರಿಂದ ನಾಮನಿರ್ದೇಶನಗೊಂಡಿದ್ದಾರೆ. ಅವರನ್ನು ಮುಂದುವರಿಸಬೇಕೋ ಬೇಡವೋ ಎಂಬುದನ್ನು ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನಿಸುತ್ತಾರೆ. ನಮ್ಮ ಪಕ್ಷದಲ್ಲಿ ಪ್ರಜಾಸತ್ತಾತ್ಮಕ ವ್ಯವಸ್ಥೆ ಇದೆ. ಅಭಿಪ್ರಾಯ ಭೇದ ಸಹಜ, ಆದರೆ ಕೇಂದ್ರ ನಾಯಕರ ತೀರ್ಮಾನವೇ ಅಂತಿಮ ಎಂದು ಆರ್. ಅಶೋಕ್ ಹೇಳಿದರು.












