ಕಿನ್ನಿಗೋಳಿ: ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಸಿಲುಕಿದ ಹೆಣ್ಣು ಚಿರತೆ – ರಕ್ಷಿಸಿ ಪಿಲಿಕುಳಕ್ಕೆ ರವಾನೆ

ಕಿನ್ನಿಗೋಳಿ : ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಆಹಾರ ಅರಸಿ ಬಂದ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿ ಬಳಿಕ ಅರಣ್ಯ ಇಲಾಖಾ ವರಿಷ್ಠರು ಪಿಲಿಕುಲ ನಿಸರ್ಗಧಾಮಕ್ಕೆ ಒಯ್ದ ಘಟನೆ ಕಿನ್ನಿಗೋಳಿ ಸಮೀಪದ ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿತ್ತಕುಂರ್ಬಿಲ್ ಶಾರದ ಅವರ ಗದ್ದೆ ಮತ್ತು ಗುಡ್ಡೆಯ ನಡುವಿನ ತೋಡಿನಲ್ಲಿ ಭಾನುವಾರ ನಡೆದಿದೆ.

ಸ್ಥಳೀಯರು ಶನಿವಾರ ರಾತ್ರಿ ಶುಭ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಹಿಂತಿರುವಾಗ ನಾಯಿ ಗೋಳಿಡುವುದು ಹಾಗೂ ಚಿರತೆ ಗೂಳಿಟ್ಟ ಸದ್ದು ಕೇಳಿ ಬಂದಿತ್ತು ಗುಮಾನಿಯಿಂದ ಭಾನುವಾರ ಬೆಳಿಗ್ಗೆ ಪರಾಮರ್ಶಿಸಿದಾಗ ಚಿರತೆಯು ಕೈಗೆ ಬಿಗಿದಿದ್ದ ಉರುಳಿನಿಂದ ತಪ್ಪಿಸಿಕೊಳ್ಳಲು ಒದ್ದಾಡಿ ಚೀರಾಡುತ್ತಿದ್ದ ಕಂಡ ಕೇಳಿ ಅಸುಪಾಸಿನವರು ಸೇರಿ ಅರಣ್ಯ ಇಲಾಖೆಗೆ ಸುದ್ದಿ ನೀಡಿದರು.

ಚಿರತೆ ಸುತ್ತಲೂ ನೆರೆದಿದ್ದವರನ್ನು ಆತಂಕ ಹಾಗೂ ಭಯದಿಂದ ತನ್ನ ಕೋರೆ ಹಲ್ಲುಗಳನ್ನು ತೋರಿಸುತ್ತಾ ಘರ್ಜಿಸಿ ಎಗರಾಡಿ ಸುಸ್ತಾಗಿ ಹೋಗಿತ್ತು. ಅಲ್ಲಿ ನೆರೆದ ಜನರು ಚಿರತೆಯ ಗಾತ್ರ, ವೇಗ, ಬೇಟೆಯಾಡುವ ಚಾಕಚಕ್ಯತೆ, ಶಕ್ತಿ ಮತ್ತು ಪ್ರಾಯದ ಬಗ್ಗೆ ವಿಮರ್ಶೆ ಮಾಡುವವರು ಒಂದು ಕಡೆಯಾದರೆ, ಸಾಕುಪ್ರಾಣಿಗಳನ್ನು ಆಪೋಶನಗೈಯ್ಯುತ್ತಿರುವ ಘಟನೆಗಳನ್ನು ಮೆಲುಕುಹಾಕಿ ಅದಕ್ಕೆ ಹಿಡಿ ಶಾಪ ಹಾಕುವವರೂ ಅಲ್ಲಿದ್ದರು.

ಕಿನ್ನಿಗೋಳಿ ವಲಯದ ಅರಣ್ಯಾಧಿಕಾರಿ ಪರಮೇಶ್ವರ್ ಹಾಗೂ ಸಿಬ್ಬಂದಿಗಳು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿ ಮೂಡಬಿದಿರೆಯ ವಲಯ ಅರಣ್ಯಾಧಿಕಾರಿ ಜೆ. ಡಿ. ದಿನೇಶ್ ಅವರಿಗೆ ಮಾಹಿತಿ ನೀಡಿ ಮಂಗಳೂರಿನ ಪಿಲಿಕುಳದ ಅರಿವಳಿಕೆ ತಜ್ಞರು ಹಾಗೂ ವೈದ್ಯಾಧಿಕಾರಿಗಳನ್ನು ಕರೆಸಲಾಯಿತು.

ಚಿರತೆಯ ಮೇಲೆ ಅರಿವಳಿಕೆಯ ಚುಚ್ಚುಮದ್ದಿನ ಔಷಧ ನೀಡುವ ಮೂಲಕ ಸ್ಥಳೀಯರ ಸಹಕಾರದಿಂದ ಸುರಕ್ಷಿತವಾಗಿ ಹಿಡಿದು ಬೋನಿಗೆ ಹಾಕಿದರು. ಬಳಿಕ ಪಿಲಿಕುಳದ ಪಶು ಸಂಗೋಪನಾ ಅಧಿಕಾರಿ ಡಾ. ಜೆರಾಲ್ಡ್ ವಿಕ್ರಮ್ ಲೋಬೊ, ಆನಿಮಲ್ ಕೇರ್ ಟೇಕರ್ ದಿನೇಶ್ ಕುಮಾರ್ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ನಂತರ ಚಿರತೆಯನ್ನು ಮಂಗಳೂರಿನ ಪಿಲಿಕುಳ ನಿಸರ್ಗಧಾಮಕ್ಕೆ ಕೊಂಡೊಯ್ಯಲಾಯಿತು.

 

Leave a Reply