ಕೃಷಿಯನ್ನು ಲಾಭದಾಯಕ ಮಾಡಿಕೊಳ್ಳಿ- ಶೀಲಾ ಶೆಟ್ಟಿ

ಉಡುಪಿ: ಕೃಷಿ ಎನ್ನುವುದು ಲಾಭವಿಲ್ಲದ ನಷ್ಟದ ಉದ್ಯೋಗ ಎನ್ನುವುದು ಹಲವೆಡೆ ಕೇಳುವ ಮಾತು, ಆದರೆ ಕೃಷಿಯನ್ನು ಲಾಭದಾಯಕ ಉದ್ಯೋಗವನ್ನಾಗಿ ಮಾಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.

image001krishi-abhiyana-udupi image002krishi-abhiyana-udupi image003krishi-abhiyana-udupi

ಅವರು ಬುಧವಾರ ಕೊಕ್ಕರ್ಣೆಯ ಗಣೇಶ ಕಲಾಮಂದಿರದಲ್ಲಿ, ಉಡುಪಿ ಜಿಲ್ಲಾ ಪಂಚಾಯತ್ , ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆಗಳ ಇಲಾಖೆಗಳ ಸಹಯೋಗದಲ್ಲಿ ನಡೆದ ಬ್ರಹ್ಮಾವರ ಹೋಬಳಿ ಮಟ್ಟದ ಕೃಷಿ ಆಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೃಷಿ ಮಾಡುವುದು ಲಾಭದಾಯಕವಲ್ಲ ಎನ್ನುವ ಉದ್ದೇಶದಿಂದ ಹಲವು ಮಂದಿ ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ ಆದರೆ ತಮ್ಮ ಜಮೀನಿನ ಮಣ್ಣಿನ ಆರೋಗ್ಯ ಪರೀಕ್ಷೆ, ಆಧುನಿಕ ಯಂತ್ರೋಪಕರಣಗಳ ಬಳಕೆ, ಕೃಷಿ ತಜ್ಞರೊಂದಿಗೆ ಚರ್ಚಿಸಿ ವೈಜ್ಞಾನಿಕ ಬೇಸಾಯ ಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ಕೃಷಿಯಿಂದ ಲಾಭ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಯಾವುದೇ ಉದ್ಯೋಗದಲ್ಲಿ ಸಿಗಲಾರದ ಸಂತೃಪ್ತಿ ಕೃಷಿಯಿಂದ ಸಿಗುತ್ತದೆ, ರೈತರು ಇಲಾಖೆಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದು, ಇಲಾಖೆಗಳಲ್ಲಿ ಲಭ್ಯವಿರುವ ಸಬ್ಸಿಡಿ ಸೇರಿದಂತೆ ವಿವಿಧ ಯೋಜನೆಗಳ ಸವಲತ್ತುಗಳನ್ನು ಪಡೆದು ಕೃಷಿ ಚಟುವಟಿಕೆ ನಡೆಸುವಂತೆ ಶೀಲಾ ಕೆ ಶೆಟ್ಟಿ ಸಲಹೆ ನೀಡಿದರು.
ಇದಕ್ಕೂ ಮುನ್ನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೃಷಿ ಅಭಿಯಾನ ಕುರಿತು ಜಿಲ್ಲೆಯಾದ್ಯಂತ ಪ್ರಚಾರ ನೀಡುವ ವಾಹನಕ್ಕೆ ಹಸಿರು ನಿಶಾನೆ ತೋರಿಸುವುದರ ಮೂಲಕ ಶೀಲಾ ಕೆ ಶೆಟ್ಟಿ ಅವರು ಚಾಲನೆ ನೀಡಿದರು.
ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ, ಕೃಷಿ ಅಭಿಯಾನದಂತಹ ಕಾರ್ಯಕ್ರಮಗಳಿಂದ ರೈತರಿಗೆ ಪ್ರೋತ್ಸಾಹ ಸಿಗಲಿ ಎಂದು ಹೇಳಿದರು.
ಕೊಕ್ಕರ್ಣೆ ಗ್ರಾ.ಪಂ. ಉಪಾಧ್ಯಕ್ಷೆ ದೇವಕಿ ಎಸ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ. ಸದಸ್ಯರಾದ ಡಾ. ಸುನೀತಾ ಡಿ.ಶೆಟ್ಟಿ, ಭುಜಂಗ ಶೆಟ್ಟಿ, ಸುಧೀರ್ ಕುಮಾರ್ ಶೆಟ್ಟಿ, ಕುಸುಮ ಪೂಜಾರ್ತಿ, ವಸಂತಿ ಪೂಜಾರಿ, ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿ ಸುಧೀರ್ ಕಾಮತ್, ಕಾವ್ಯಶ್ರೀ, ಶಂಕರ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿ ಸಹಾಯಕ ಕೃಷಿ ನಿರ್ದೇಶಕ ಮೋಹನ್‍ರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷಿ ಅಧಿಕಾರಿ ರೂಪಾ.ಜಿ.ಮಾಡ ಸ್ವಾಗತಿಸಿದರು, ಚಂದ್ರಶೇಖರ್ ವಂದಿಸಿದರು.
ಇದೇ ಸಂದರ್ಭದಲ್ಲಿ 5 ಮಂದಿ ರೈತರಿಗೆ ಪವರ್ ಟಿಲ್ಲರ್ ಮತ್ತು ಒಬ್ಬರಿಗೆ ಪವರ್ ವೀಡರ್ ವಿತರಿಸಲಾಯಿತು.

Leave a Reply

Please enter your comment!
Please enter your name here