ಬಾಗಲಕೋಟೆಯಲ್ಲಿ ಮಣ್ಣಿನ ದಿಬ್ಬ ಕುಸಿದು ನಾಲ್ವರು ಕಾರ್ಮಿಕರು ಸಾವು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಸಮೀಪ ಮಣ್ಣಿನ ದಿಬ್ಬ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ಶನಿವಾರ ನಡೆದಿದೆ.

ಟ್ರಾಕ್ಟರ್ಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಏಕಾಏಕಿ ದಿಬ್ಬ ಕುಸಿದು ಬಿದ್ದ ಪರಿಣಾಮ ನಾಲ್ವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ನನ್ನು ರಕ್ಷಿಸಿ ಆಸ್ಪತ್ರಗೆ ದಾಖಲಿಸಲಾಗಿದೆ. ಇನ್ನೂ ಇಬ್ಬರು ಮಣ್ಣಿನಡಿಯಲ್ಲಿ ಸಿಲುಕಿ ಮೃತಪಟ್ಟಿರುವ ಶಂಕೆ ವ್ಯಕ್ತ ಪಡಿಸಲಾಗಿದೆ.

labour

ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ನಾಲ್ವರು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ಸಾಥ್ ನೀಡುತ್ತಿದ್ದಾರೆ.

ಮೃತಪಟ್ಟವರನ್ನು ಇಮಾಮ್ ಸಾಬ್ ಸನದಿ(25), ಗಂಗಪ್ಪ ಕಾಂಬ್ಳೆ(35), ಗುರು ಸೂರ್ಯವಂಶಿ(38) ಹಾಗೂ ಅಬೂಬಕ್ಕರ್(25) ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ ಜಮಖಂಡಿ ತಾಲೂಕಿನ ಆತಂಗಿ ಗ್ರಾಮದವರಾಗಿದ್ದಾರೆ.

ಘಟನೆಯಲ್ಲಿ ಹುಸೇನ್ ಸಾಬ್, ರಾಮು ಧಾರವಾಡಕರ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಹಾಗೂ ತಹಶೀಲ್ದಾರ್ ಎ,ಎಲ್. ಅದಾಡೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply