ಮಂಗಳೂರು: ಸ್ಕಿಲ್ ಗೇಮ್, ಜೂಜು ಅಡ್ಡೆ ಮುಚ್ಚಿಸಲು ನೂತನ ಆಯುಕ್ತರಿಗೆ ಡಿವೈಎಫ್ಐ ಆಗ್ರಹ

ಮಂಗಳೂರು: ನಗರದ ವಿವಿಧ ಭಾಗಗಳಲ್ಲಿ ಅಕ್ರಮ ಸ್ಕಿಲ್ ಗೇಮ್, ಜೂಜು ಅಡ್ಡೆಗಳು ವ್ಯಾಪಕವಾಗಿ ಕಾರ್ಯಾಚರಿಸುತ್ತಿದೆ. ಈ ಕಾನೂನುಬಾಹಿರ ಸ್ಕಿಲ್ ಗೇಮ್ ಗಳಿಂದ ಆಟೋ ಚಾಲಕರು, ಕೂಲಿಕಾರರು, ವಿದ್ಯಾರ್ಥಿಗಳು ಜೂಜಿನ ದಾಸರಾಗುತ್ತಿದ್ದಾರೆ. ಹಲವು ಕುಟುಂಬಗಳು ಈ ಹಿನ್ನಲೆಯಲ್ಲಿ ಬೀದಿಪಾಲಾಗುತ್ತಿದೆ. ನಗರಕ್ಕೆ ನೂತನವಾಗಿ ಆಗಮಿಸಿರುವ ಕಮಿಷನರ್ ಚಂದ್ರಶೇಖರ್ ತಕ್ಷಣ ಈ ಜೂಜು ಅಡ್ಡೆಗಳನ್ನು ಮುಚ್ಚಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಈ ಹಿಂದಿನ ಪೊಲೀಸ್ ಕಮಿಷನರ್ ಆಗಿದ್ದ ಎ ಎಸ್ ಮುರುಗನ್ ರವರು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸ್ಕಿಲ್ ಗೇಮ್ ಸೇರಿದಂತೆ ಹಲವು ಜೂಜಾಟ ಕೇಂದ್ರಗಳು ನಾಯಿಕೊಡೆಗಳಂತೆ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದರು. ಮೊದಲೇ ಕೋಮುವಾದಿಗಳ ಪ್ರಯೋಗಶಾಲೆಯಾಗಿದ್ದ ಮಂಗಳೂರು ನಗರದಲ್ಲಿ ಇಂತಹ ದಂಧೆಗಳಿಂದ ಕೋಮುವಾದಿ ಪುಂಡ ಯುವಕರಿಗೆ ಹಣಕಾಸಿನ ನೆರವು ನೀಡಿದಂತಾಯಿತು. ಅಲ್ಲದೆ ಎ ಎಸ್ ಮುರುಗನ್ ಅವಧಿಯಲ್ಲಿ ಕೊಲೆ, ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು, ಅದಕ್ಕೆ ಪರೋಕ್ಷವಾಗಿ ಈ ಜೂಜು ಅಡ್ಡೆಗಳೂ ಒಂದು ಕಾರಣ ಎಂದು ಡಿ ವೈಎಫ್ಐ ಕಂಡುಕೊಂಡಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತ ಎ ಎಸ್ ಮುರುಗನ್ ಅವರನ್ನು ಬೇಟಿ ಮಾಡಿ ಮನವಿಗಳನ್ನೂ ನೀಡಲಾಗಿತ್ತು. ಆದರೆ ಪೊಲೀಸ್ ಆಯುಕ್ತರು ಸ್ಪಂದನೆ ಮಾಡದೇ ಇದ್ದಾಗ ಡಿವೈಎಫ್ಐ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಸ್ಕಿಲ್ ಗೇಮ್ ಮತ್ತು ಜೂಜಾಟದ ವಿರುದ್ಧ ಕ್ರಮ ಕೈಗೊಳ್ಳದೆ ಕೋಮುವಾದಿ ಚಟುವಟಿಕೆಗಳು, ಕ್ರಿಮಿನಲ್ ಚಟುವಟಿಕೆಗಳಿಗೆ ಪೂರಕವಾಗಿ ವರ್ತಿಸುತ್ತಿದ್ದ ಆಯುಕ್ತ ಎ ಎಸ್ ಮುರುಗನ್ ವಿರುದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಗೃಹ ಇಲಾಖೆಗೆ ದೂರು ನೀಡಲಾಗಿತ್ತು. ಇದೀಗ ಎ ಎಸ್ ಮುರುಗನ್ ವರ್ಗಾವಣೆಯಾಗಿದ್ದು, ನೂತನ ಆಯುಕ್ತರಾಗಿ ಆಗಮಿಸಿರೋ ಚಂದ್ರಶೇಖರ್ ರವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.

ನೂತನ ಪೊಲೀಸ್ ಆಯುಕ್ತ ಚಂದ್ರಶೇಖರ್ ರವರು ತಕ್ಷಣ ಕಾರ್ಯಪ್ರವೃತ್ತರಾಗಿ ಕ್ರಿಮಿನಲ್ ಚಟುವಟಿಕೆಗಳಿಗೆ ಪೂರಕವಾಗಿರುವ ಸ್ಕಿಲ್ ಗೇಮ್, ಇಸ್ಪೀಟ್ ಅಡ್ಡೆ, ಡಾಮಾರು – ಪೆಟ್ರೋಲ್ ದಂಧೆ ಸೇರಿದಂತೆ ಮಂಗಳೂರಿನಲ್ಲಿ ಸಕ್ರೀಯವಾಗಿರುವ ಮಾಫೀಯಾಗಳನ್ನು ಮಟ್ಟ ಹಾಕಬೇಕು. ಪೊಲೀಸ್ ಇಲಾಖೆ ತನ್ನ ಹಳೇ ನೀತಿಯನ್ನು ಮುಂದುವರೆಸಿದ್ದೇ ಆದಲ್ಲಿ ಸಮಾನ ಮನಸ್ಕ ಸಂಘಟನೆಗಳನ್ನು ಒಳಗೊಂಡು ತೀವ್ರ ರೀತಿಯ ಹೋರಾಟ ಮಾಡಬೇಕಾಗುತ್ತದೆ ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.

Leave a Reply