ಕರ್ತವ್ಯದ ವೇಳೆ ಸಿಬಂದಿಗೆ ನೋವಾಗುವಂತೆ ವರ್ತಿಸಿದ್ದರೆ ಕ್ಷಮಿಸಿ; ಸಿಬಂದಿಗಳಿಗೆ ಅಣ್ಣಾಮಲೈ ವಿದಾಯ ಪತ್ರ

Spread the love

ಕರ್ತವ್ಯದ ವೇಳೆ ಸಿಬಂದಿಗೆ ನೋವಾಗುವಂತೆ ವರ್ತಿಸಿದ್ದರೆ ಕ್ಷಮಿಸಿ; ಸಿಬಂದಿಗಳಿಗೆ ಅಣ್ಣಾಮಲೈ ವಿದಾಯ ಪತ್ರ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾಗಿ ಒಂದು ವರ್ಷ ಒಂಬತ್ತು ತಿಂಗಳು ಸೇವೆ ಸಲ್ಲಿಸಿ ಗುರುವಾರ ರಾಮನಗರ ಜಿಲ್ಲೆಗೆ ವರ್ಗಾವಣೆಗೊಂಡ ಸಿಂಗಮ್ ಖ್ಯಾತಿಯ ಕೆ ಅಣ್ಣಾಮಲೈ ಅವರು ತಮ್ಮ ಸಹದ್ಯೋಗಿಗಳು ನೀಡಿದ ಸಹಕಾರಕ್ಕೆ ಧನ್ಯವಾದ ಅರ್ಪಿಸಿ ಪತ್ರ ಬರೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಂದು ವರ್ಷ ಒಂಬತ್ತು ತಿಂಗಳು ನಾನು ಪೋಲಿಸ್ ಅಧೀಕ್ಷಕನಾಗಿ ಕರ್ತವ್ಯ ನಿರ್ವಹಿಸಿರುತ್ತೇನೆ. ಮೇಲ್ಕಂಡ ಅವಧಿಯಲ್ಲಿ ನೀವೆಲ್ಲರೂ ನನ್ನೊಂದಿಗೆ ಭುಜಕ್ಕೆ ಭುಜ ಸೇರಿಸಿಕೊಂಡು ಬಹಳ ಉತ್ತಮವಾಗಿ ಸಹಕಾರವನ್ನು ನೀಡಿ ಅತ್ಯುತ್ತಮವಾಗಿ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಸಾರ್ವಜನಿಕರಿಗೆ ಉತ್ತಮವಾದ ಸೇವೆ ಹಾಗೂ ಸಮಾಜಕ್ಕೆ ಭದ್ರತೆಯನ್ನು ಒದಗಿಸಿರುತ್ತೀರಿ.

ನಾನು ಸಹ ನಿಮ್ಮಲ್ಲಿ ಒಬ್ಬನು ಎಂಬುದಾಗಿ ತಿಳಿದುಕೊಂಡು, ನಾನು ನಿಮ್ಮ ಮೇಲಿರುವೆನೆಂದು ಎಂದಿಗೂ ಯೋಚಿಸಿಲ್ಲ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೋಲಿಸ್ ಇಲಾಖೆಗೆ ಸಾರ್ವಜನಿಕರಿಂದ ದೊರೆತ ಗೌರವಕ್ಕೆ ನೀವುಗಳೇ ಕಾರಣ. ಯಾವುದೇ ಜಟಿಲ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಮತ್ತು ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ದೊರೆತ ಯಶಸ್ಸಿಗೆ ನೀವುಗಳೇ ಕಾರಣ. ಎಲ್ಲಾ ರೀತಿಯ ಶ್ರೇಯಸ್ಸು ನಿಮಗೆಲ್ಲರಿಗೂ ಸೇರಬೇಕು. ಕೇವಲ ನಾನು ಮಾರ್ಗದರ್ಶಕನಾಗಿ ಕೆಲಸ ಮಾಡಿರುತ್ತೇನೆ. ನಾನು ನಿಮಗೆ ಮಾರ್ಗದರ್ಶನ ಮಾತ್ರ ನೀಡಿದ್ದೇನೆ.

ಕೆಲವೊಂದು ಪ್ರಸಂಗಗಳಲ್ಲಿ ನಿಮ್ಮೊಂದಿಗೆ ಕಠಿಣವಾಗಿ ವರ್ತಿಸಿರುತ್ತೇನೆ. ನಿಮ್ಮಿಂದ ಇನ್ನೂ ಉತ್ತಮ ಕೆಲಸ ಮಾಡಿಸಲಿಕ್ಕೆ ಮಾತ್ರ ನಾನು ಹೀಗೆ ಮಾಡಿದ್ದು, ಯಾರಿಗಾದರೂ ಸಹ ಮನಸ್ಸಿಗೆ ನೋವುಂಟಾಗಿದ್ದರೆ ನಾನು ಅದಕ್ಕೆ ಕ್ಷಮೆ ಯಾಚಿಸುತ್ತೇನೆ ಇದನ್ನು ಯಾರೂ ವೈಯುಕ್ತಿವಾಗಿ ತೆಗೆದುಕೊಳ್ಳಬೇಡಿ.

ಕರ್ನಾಟಕ ಸರ್ಕಾರದ ಆದೇಶದ ಅನ್ವಯ ನನ್ನನ್ನು ರಾಮನಗರ ಜಿಲ್ಲೆಗೆ ವರ್ಗಾಯಿಸಿಲಾಗಿದೆ. ಈ ನನ್ನ ವರ್ಗಾವಣೆಯನ್ನು ನಾನು ಸವಾಲಾಗಿ ಸ್ವೀಕರಿಸುತ್ತೇನೆ. ನೀವೆಲ್ಲರೂ ನನ್ನ ಮೇಲೆ ನಂಬಿಕೆಯನ್ನು ಇಟ್ಟುಕೊಳ್ಳಬಹುದು ಮತ್ತು ನಾನು ಹಾಗೆಯೇ ಇರುತ್ತೇನೆ. ಇದೇ ರೀತಿಯಾಗಿ ಬೇರೆಯವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತೇನೆ.

ಇದೊಂದು ಸಣ್ಣ ಜಗತ್ತು. ನಾವೆಲ್ಲರೂ ಪುನಃ ಭೇಟಿ ಮಾಡೋಣ. ನೀವು ಮತ್ತು ನಿಮ್ಮ ಕುಟುಂಬದವರು ರಾಮನಗರ ಕಡೆ ಬಂದಾಗ ಸಮಯ ಮಾಡಿಕೊಂಡು ನನ್ನನ್ನು ಭೇಟಿ ಮಾಡಿ ಹೋಗಿ. ನಾನು ನಿಮ್ಮನ್ನು ಪುನಃ ಭೇಟಿ ಮಾಡಲು ಬಹಳ ಉತ್ಸುಕನಾಗಿದ್ದೇನೆ.

ಜೀವನದಲ್ಲಿ ಒಂದು ಗುಂಪನ್ನು ಸಮಾಜದ ಸುಧಾರಣೆಗಾಗಿ ಮುನ್ನಡೆಸುವುದು ಒಂದು ರೀತಿ ಸ್ಪೂರ್ತಿಯಾಗಿದ್ದು, ಮುನ್ನಡೆಸವುದು ಬಹಳ ಸುಲಭ. ಆದರೆ ಗುಂಪಿನಲ್ಲಿ ಇದ್ದುಕೊಂಡು ಎಲ್ಲರೊಂದಿಗೆ ಕೆಲಸ ಮಾಡುವುದು ಬಹಳ ಕಷ್ಟಕರ.

ನಿಮ್ಮ ಸಹಕಾರ ಮತ್ತು ಅತ್ಯುತ್ತಮ ಕರ್ತವ್ಯಕ್ಕಾಗಿ ಮತ್ತೊಮ್ಮೆ ನಿಮ್ಮನ್ನೆಲ್ಲಾ ನಾನು ವೈಯುಕ್ತಿಕವಾಗಿ ವಂದಿಸುತ್ತೇನೆ. ಹಾಗೂ ನಿಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸುತ್ತೇನೆ. ನನ್ನ ಶುಭಾಷಯಗಳನ್ನು ನಿಮ್ಮ ಕುಟುಂಬದ ಸದಸ್ಯರಿಗೂ ತಿಳಿಸಿ ಎಂದು ಪತ್ರದಲ್ಲಿ ಅತ್ಯಂತ ಭಾವುಕರಾಗಿ ತನ್ನ ಸಿಬಂದಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

2016 ಆಗಸ್ಟ್ 4ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಅಣ್ಣಾಮಲೈ ಒಂದು ವರ್ಷ ಒಂಬತ್ತು ತಿಂಗಳು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಖಡಕ್ ಅಧಿಕಾರಿಯೆಂದೇ ಹೆಸರು ಗಳಿಸಿದ್ದ ಅಣ್ಣಾಮಲೈ, ಮಾನವೀಯ ಕೆಲಸಗಳ ಮೂಲಕವೂ ಜನಮಾನಸದಲ್ಲಿ ಅಚ್ಚೊತ್ತಿದ್ದರು.

ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲೆಯಲ್ಲಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಅಣ್ಣಾಮಲೈ ಜೂಜು ಅಡ್ಡೆಗಳನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಅಧಿಕಾರ ಸ್ವೀಕರಿಸಿದ ಆರಂಭದ ದಿನಗಳಲ್ಲಿ ಇಸ್ಪಿಟ್ ಕ್ಲಬ್ಗಳ ಮೇಲೆ ಸ್ವತಃ ದಾಳಿ ನಡೆಸಿ ನಡುಕು ಹುಟ್ಟಿಸಿದ್ದರು.

ಕಲ್ಲಪ್ಪ ಹಂಡಿಬಾಗ ಆತ್ಮಹತ್ಯೆಗೆ ಕಾರಣವಾದ ಜೂಜು, ಕ್ರಿಕೆಟ್ ಬೆಟ್ಟಿಂಗ್ ಮಟ್ಟ ಹಾಕಲು ಸಾಕಷ್ಟು ಶ್ರಮಿಸಿದ್ದರು. ಶೃಂಗೇರಿ ಜೆಸಿಬಿಎಂ ಕಾಲೇಜು ವಿದ್ಯಾರ್ಥಿ ಅಭಿಷೇಕ್ ಆತ್ಮಹತ್ಯೆ ಪ್ರಕರಣ, ಮುತ್ತೋಟ್ ಫೈನಾನ್ಸ್ನಲ್ಲಿ ಚಿನ್ನ ಕಳವು ಪ್ರಕರಣ, ಕ್ರಿಕೆಟ್ ಬೆಟ್ಟಿಂಗ್, ಹನಿಟ್ರ್ಯಾಪ್, ಮೂಡಿಗೆರೆಯ ಧನ್ಯಶ್ರೀ, ಶೃಂಗೇರಿಯ ಸ್ವಾತಿ ಆತ್ಮಹತ್ಯೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಖಡಕ್ ನಿಲುವು ಹೊಂದಿದ್ದರು.

ಜಿಲ್ಲೆಯ ರಾಜಕೀಯ ಮೇಲಾಟದಿಂದ ಬೇಸತ್ತಿದ್ದ ಅಣ್ಣಾಮಲೈ ಒಂದು ಹಂತದಲ್ಲಿ ಬೆಂಗಳೂರಿಗೆ ವರ್ಗಾವಣೆ ಬಯಸಿದ್ದರು. ಆದರೆ, ಕೋಮು ಸೂಕ್ಷ್ಮ ಜಿಲ್ಲೆಯಾದ ಕಾರಣ ಸರಕಾರ ಅಣ್ಣಾಮಲೈ ಅವರನ್ನು ವರ್ಗಾವಣೆ ಮಾಡದೆ ಜಿಲ್ಲೆಯಲ್ಲೇ ಉಳಿಸಿತ್ತು. ದತ್ತಜಯಂತಿ ಸಂದರ್ಭ ದತ್ತಭಕ್ತರು ನಿರ್ಬಂಧಿತ ಪ್ರದೇಶದೊಳಗೆ ನುಗ್ಗಿ ಗೋರಿಗೆ ಹಾನಿ ಮಾಡಿದರೂ ನಂತರದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಅಣ್ಣಾಮಲೈ ತೆಗೆದುಕೊಂಡ ಖಡಕ್ ನಿರ್ಧಾರಗಳ ಬಗ್ಗೆ ಜನ ಮೆಚ್ಚುಗೆ ಸೂಚಿಸಿದ್ದರು.

ಸಮಸ್ಯೆಗಳನ್ನು ಹೊತ್ತು ಕಚೇರಿಗೆ ಬರುತ್ತಿದ್ದವರಿಗೆ ಸಾಂತ್ವನ ಹೇಳುವ ಜತೆಗೆ ತಪ್ಪು ಮಾಡಿದವರಿಗೆ ಅಷ್ಟೇ ರಫ್ ಅಂಡ್ ಟಫ್ ಆಗಿ ಪಾಠವನ್ನೂ ಕಲಿಸುತ್ತಿದ್ದರು. ಎಸ್ಪಿ ಕಚೇರಿ ಇಂತಹ ಹಲವು ಘಟನೆಗಳಿಗೆ ಪ್ರತಿದಿನ ಸಾಕ್ಷಿಯಾಗುತ್ತಿತ್ತು.


Spread the love