ಕೆ.ಎಸ್.ಆರ್.ಟಿ.ಸಿ. ಬಸ್ ನೌಕರರ ಮುಷ್ಕರ ಶಾಲಾ ಕಾಲೇಜುಗಳಿಗೆ ರಜೆಗೆ ಕಾರ್ಣಿಕ್ ಆಗ್ರಹ

Spread the love

ಕೆ.ಎಸ್.ಆರ್.ಟಿ.ಸಿ. ಬಸ್ ನೌಕರರ ಮುಷ್ಕರ ಶಾಲಾ ಕಾಲೇಜುಗಳಿಗೆ ರಜೆಗೆ ಕಾರ್ಣಿಕ್ ಆಗ್ರಹ

ಮಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯಾದಾದ್ಯಂತ ಕೆ.ಎಸ್.ಆರ್.ಟಿ.ಸಿ. ಬಸ್ ಸಿಬ್ಬಂದಿಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನಲೆಯಲ್ಲಿ ರಾಜ್ಯದಾದ್ಯಂತ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ಥವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಬೆಳ್ತಂಗಡಿ, ಪುತ್ತೂರು ಹಾಗೂ ಬಂಟ್ವಾಳ ತಾಲೂಕುಗಳಲ್ಲೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳ ವ್ಯವಸ್ಥೆ ಮಾತ್ರ ಇರುವ ಹಿನ್ನಲೆಯಲ್ಲಿ ಆ ಭಾಗಗಳಲ್ಲಿ ಮುಷ್ಕರದ ಬಿಸಿ ತುಸು ಹೆಚ್ಚೆ ಇದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸರಿಯಾದ ಸಮಯದಲ್ಲಿ ತಲುಪಬೇಕಾದ ಅನಿವಾರ್ಯತೆಯಲ್ಲಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹಾಗೂ ಕಿಕ್ಕಿರಿದು ಕೂಡಿದ ವಾಹನಗಳಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು, ಮಳೆಯಲ್ಲಿ ತೊಯ್ದುಕೊಂಡು ಪ್ರಯಾಣಿಸುವ ಅನಿವಾರ್ಯತೆ ಉಂಟಾಗಿದೆ. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಈಗಾಗಲೇ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ಮೂಲಕ ವಿದ್ಯಾರ್ಥಿಗಳಿಗೆ ಮುಷ್ಕರದ ಬಿಸಿ ತಟ್ಟದ ಹಾಗೆ ನೋಡಿಕೊಳ್ಳಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಜೆ ನೀಡುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದೇ ಇರುವುದು ದೊಡ್ಡ ದುರಂತ.

ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವುದಕ್ಕಾಗಿ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಇರುವುದರಿಂದ ಯಾವುದೇ ದುರಂತ ಸಂಭವಿಸಿದಲ್ಲಿ ಜಿಲ್ಲಾಡಳಿತವೇ ಸಂಪೂರ್ಣ ಜವಬ್ದಾರಿಯನ್ನು ಹೊರಬೇಕಾಗುತ್ತದೆ. ವಿದ್ಯಾರ್ಥಿಗಳ ಸಮಸ್ಯೆಯನ್ನು ಕೂಡಲೇ ಅರ್ಥೈಸಿಕೊಂಡು ದುರಂತಗಳು ಸಂಭವಿಸುವ ಮುನ್ನವೇ ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆಯನ್ನು ನೆಚ್ಚಿಕೊಂಡಿರುವ ಭಾಗಗಳಾದ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಮುಷ್ಕರ ಅಂತ್ಯವಾಗುವವರೆಗೂ ರಜೆ ನೀಡಿ ಆದೇಶ ಹೊರಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ಆಗ್ರಹಿಸಿದ್ದಾರೆ.


Spread the love