ಜಿ.ಎಸ್.ಟಿ. ಗ್ರಾಮೀಣ ಮಹಿಳೆಯರಿಗೆ ಕಂಟಕ; ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್

Spread the love

ಜಿ.ಎಸ್.ಟಿ. ಗ್ರಾಮೀಣ ಮಹಿಳೆಯರಿಗೆ ಕಂಟಕ; ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್

ಉಡುಪಿ: ಜಿ.ಎಸ್.ಟಿ. ಗ್ರಾಮೀಣ ಮಹಿಳೆಯರಿಗೆ ಕಂಟಕವಾಗಿದ್ದು, ಹೆಣ್ಣು ಮಕ್ಕಳು ಉಪಯೋಗಿಸುವ ಸ್ಯಾನಿಟರಿ ನ್ಯಾಪ್‍ಕಿನ್‍ಗಳ ಮೇಲೆ ವಿಧಿಸಿರುವ 12% ಜಿ.ಎಸ್.ಟಿ. ನರೇಂದ್ರ ಮೋದಿಯವರ ಬಿಜೆಪಿ ಸರಕಾರಕ್ಕೆ ಮಹಿಳೆಯರ ಬಗ್ಗೆ ಇರುವ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ ಎಂದು ಉಡುಪಿ ಮಹಿಳಾ ಕಾಂಗ್ರೆಸ್ ಟೀಕಿಸಿದೆ.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರುಗಿದ ಜಿಲ್ಲಾ ಮಹಿಳಾ ಕಾಂಗ್ರೆಸಿನ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಮಾತನಾಡಿದ ಪ್ರಧಾನ ಕಾರ್ಯದರ್ಶಿಗಳಾದ ಡಾ| ಸುನೀತಾ ಡಿ. ಶೆಟ್ಟಿಯವರು ಮಾತನಾಡುತ್ತಾ ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಮಹಿಳೆಯರು ಮನೆಯಲ್ಲಿ ತಿಂಡಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಆದರೆ ಜಿ.ಎಸ್.ಟಿ. ಆರಂಭವಾದ ನಂತರ ಅವರೆಲ್ಲರಿಗೂ ಟಿನ್ ನಂಬರ್ ಪಡೆಯುವಂತೆ ಸೂಚನೆ ಬಂದಿದ್ದು ಈ ನಂಬರ್ ಪಡೆಯಲು ಭೂ ಪರಿವರ್ತಿತ ಭೂಮಿಯ ಅವಶ್ಯಕತೆ ಇದ್ದು ಇದನ್ನು ಯಾವುದನ್ನೂ ಮಾಡಲು ಸಾಧ್ಯವಾಗದೆ. ಇದೀಗ ನಿರುದ್ಯೋಗಿಗಳಾಗಿದ್ದು ತೀರಾ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ ಎಂದರು. ಮಾತ್ರವಲ್ಲ ಹೆಣ್ಣು ಮಕ್ಕಳು ಉಪಯೋಗಿಸುವ ಸ್ಯಾನಿಟರಿ ನ್ಯಾಪ್‍ಕಿನ್‍ಗಳ ಮೇಲೆ ವಿಧಿಸಿರುವ 12% ಜಿ.ಎಸ್.ಟಿ. ನರೇಂದ್ರ ಮೋದಿಯವರ ಬಿಜೆಪಿ ಸರಕಾರಕ್ಕೆ ಮಹಿಳೆಯರ ಬಗ್ಗೆ ಇರುವ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ ಎಂದರು.

ಉಪಾಧ್ಯಕ್ಷರಾದ ಜ್ಯೋತಿ ಹೆಬ್ಬಾರ್‍ರವರು ಮಾತನಾಡುತ್ತಾ ಮಹಿಳೆಯರು ಸೂಕ್ಷ್ಮಗ್ರಾಹಿಗಳು, ಉತ್ತಮ ರಾಜಕೀಯ ಮೌಲ್ಯಗಳನ್ನು ಜೀವನದಲ್ಲಿ ಕರಗತ ಮಾಡಿಕೊಳ್ಳಬೇಕು ಎಂದರು. ಇತ್ತೀಚಿಗೆ ಮಾಧ್ಯಮದಲ್ಲಿ ಪ್ರಕಟಗೊಂಡ ಗವರ್ನರ್ ಊರ್ಜಿತ್ ಪಟೇಲ್‍ರವರ ಹಳೇ ನೋಟುಗಳು ಇನ್ನೂ ಎಣಿಕೆಯಾಗಿಲ್ಲ ಎಂಬ ಹೇಳಿಕೆ ತೀರಾ ಹಾಸ್ಯಾಸ್ಪದ. ಪ್ರಸ್ತುತ ಡಿಜಿಟಲ್ ಯುಗದಲ್ಲಿ ಈ ಹೇಳಿಕೆ ಸಂಶಯವನ್ನು ಮೂಡಿಸುತ್ತದೆ ಎಂದರು.

ಆರ್.ಜಿ.ಪಿ.ಆರ್.ಎಸ್. ನ ಜಿಲ್ಲಾ ಸಂಯೋಜಕರಾದ ರೋಶನಿ ಒಲಿವರ್‍ರವರು ಇತ್ತೀಚಿಗೆ ನಮ್ಮ ಸಂಸದೆ ಶೋಭಾ ಕರಂದ್ಲಾಜೆಯವರು ಕೇಂದ್ರಕ್ಕೆ ರವಾನಿಸಿದ ಪತ್ರವನ್ನು ಉಲ್ಲೇಖಿಸುತ್ತಾ ನಮ್ಮ ಸಂಸದೆ ಜನರಲ್ಲಿ ಸಾಮರಸ್ಯವನ್ನು ಹುಟ್ಟುಹಾಕುವ ಬದಲು ಜಾತಿಯ ಆಧಾರದ ಮೇಲೆ ಸಾಮರಸ್ಯದಿಂದ ಇರುವ ಸಮಾಜವನ್ನು ತಮ್ಮ ಸುಳ್ಳು ಮಾಹಿತಿಯ ಮೂಲಕ ವಿಭಜನೆ ಮಾಡಲು ಹೊರಟಿರುವುದು ನಮ್ಮ ದುರಂತ ಎಂದರು. ಸಮಾಜದ ಬಗ್ಗೆ ಚಿಂತಿಸಬೇಕಾದ ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆಯ ಈ ನಡವಳಿಕೆ ಮಹಿಳೆಯರಲ್ಲಿ ಬೇಸರವನ್ನು ಉಂಟು ಮಾಡಿದೆ ಎಂದರು.

ಕೆ.ಪಿ.ಸಿ.ಸಿ. ಗೆ ಕಾರ್ಯದರ್ಶಿಯಾಗಿ ನೇಮಕಗೊಂಡ ಜಿಲ್ಲಾ ಅಧ್ಯಕ್ಷರಾದ ವೆರೋನಿಕಾ ಕರ್ನೇಲಿಯೋ ರವರಿಗೆ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಪದ್ಮಾವತಿ ಟೀಚರ್‍ರವರು ಅಭಿನಂದಿಸಿದರು.

ಬ್ಲಾಕ್ ಅಧ್ಯಕ್ಷರುಗಳಾದ ಗೋಪಿ ಕೆ. ನಾಯ್ಕ್, ಸುಜಾತ ಆಚಾರ್ಯ, ಸಂಧ್ಯಾ ಶೆಟ್ಟಿ, ಮೇರಿ ಡಿ’ಸೋಜಾ, ಪುಷ್ಪ, ಶಾಂತಿ ಫಿರೇರಾ, ಭಾನು ಭಾಸ್ಕರ್, ಐರಿನ್ ಫಿರೆರಾ, ಅಮೃತ, ಶಾಂತಿ ಡಯಸ್ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.


Spread the love