18ರಂದು ಬಾರ್ಕೂರು ಮೇರಿನೊಲ್ ಪ್ರೌಢಶಾಲೆ ಸುವರ್ಣ ಮಹೋತ್ಸವ ಉದ್ಘಾಟನೆ

ಬ್ರಹ್ಮಾವರ: ಸುವರ್ಣ ಮಹೋತ್ಸವ ಸಂಭ್ರಮದಲ್ಲಿರುವ ಬಾರ್ಕೂರು ಮೇರಿನೊಲ್ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ವರ್ಷಾಚರಣೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇದೇ 18ರಂದು ನಡೆಯಲಿದೆ ಎಂದು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಸಿ ಪೂಜಾರಿ ತಿಳಿಸಿದರು.

07bvr merinol

ಶಾಲೆಯಲ್ಲಿ ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪರಿಸರವಾದ ಬಾರ್ಕೂರು ಆಸುಪಾಸಿನ ಹೆಣ್ಣು ಮಕ್ಕಳಿಗೆ ಒಂದು ಪ್ರೌಢಶಾಲೆಯ ಅಗತ್ಯವಿದೆಯೆಂದು ಮನಗಂಡು 1966ರ ಜೂ.6ರಂದು ಸಿಸ್ಟರ್ಸ್‌ ಆಫ್‌ ಚಾರಿಟಿ ಭಗಿನಿಯರು ಈಗಿನ ಮೇರಿನೊಲ್ ಹಿರಿಯ ಪ್ರಾಥಮಿಕ ಶಾಲೆಯ ಒಂದು ಭಾಗದಲ್ಲಿ ಪ್ರೌಢಶಾಲೆಯನ್ನು ಆರಂಭಿಸಿದ್ದರು.

ಕ್ರಮೇಣ ಇದು ಸಹಶಿಕ್ಷಣ ಶಾಲೆಯಾಗಿ ಪರಿವರ್ತಿಸಲ್ಪಟ್ಟಿತು. ಕಳೆದ ಐದು ದಶಕಗಳಿಂದ ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿದ್ದಾರೆ. ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ. ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಾ ಬಂದಿರುವ ಶಾಲೆಯ 2007ರಿಂದ 15ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸತತ 6 ಬಾರಿ ಶೇ 100 ಫಲಿತಾಂಶ ಪಡೆಯುತ್ತಾ ಬಂದಿದೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಮುಂಚೂಣಿಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ಸುವರ್ಣ ಸಂಭ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮ, ಶಿಕ್ಷಕರು ಮತ್ತು ಪೋಷಕರಿಗೆ ಕಾರ್ಯಾಗಾರ, ಅಂತರಶಾಲಾ ಮಟ್ಟದ ಸ್ಪರ್ಧೆಗಳು, ಶಾಲಾ ಮಟ್ಟದ ಸ್ಪರ್ಧೆಗಳು, ಹಳೆ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಡಿಸೆಂಬರ್‌ನಲ್ಲಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಸ್ಟೇನಿ ಪಾಯಸ್, ಸಂಚಾಲಕ ಸಿ.ಸಿಲ್ವೆಸ್ಟ್ರೀನಾ ಲೋಬೋ, ಸಂಘಟನಾ ಕಾರ್ಯದರ್ಶಿ ಕಿಶೋರ್ ಗೊನ್ಸಾಲ್ವಿನ್, ಜೊತೆ ಕಾರ್ಯದರ್ಶಿ ಸತೀಶ್ ಅಮೀನ್, ಸಹ ಶಿಕ್ಷಕ ರಮಾನಂದ ರಾವ್, ಕೋಶಾಧಿಕಾರಿ ವಿವೆಟ್ ಲೂವಿಸ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಶಂಕರ್ ಪೂಜಾರಿ ಉಪಸ್ಥಿತರಿದ್ದರು.

Leave a Reply

Please enter your comment!
Please enter your name here