ಅಂಬ್ಯುಲೆನ್ಸ್ ಕಳವು ಪ್ರಕರಣ ಪತ್ತೆ: ಆರೋಪಿ ಬಂಧನ, ವಾಹನ ವಶ

Spread the love

ಅಂಬ್ಯುಲೆನ್ಸ್ ಕಳವು ಪ್ರಕರಣ ಪತ್ತೆ: ಆರೋಪಿ ಬಂಧನ, ವಾಹನ ವಶ

ಕಡಬ: ಕಡಬ ಶಿರಾಡಿ ನಿವಾಸಿ ಸುರೇಶ್ (46) ಅವರ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಂಬ್ಯುಲೆನ್ಸ್ ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ ಕಳವಾಗಿದ್ದ ಅಂಬ್ಯುಲೆನ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ.

ಪಿರ್ಯಾದಿದಾರ ಸುರೇಶ್ ಅವರು ಅಂಬ್ಯುಲೆನ್ಸ್ ವಾಹನ ಸಂಖ್ಯೆ KA-19-C-7557 ರ ಚಾಲಕರಾಗಿದ್ದು, ಪ್ರತಿದಿನ ರಾತ್ರಿ ಗುಂಡ್ಯ ಚೆಕ್‌ಪೋಸ್ಟ್ ಬಳಿ ಅಂಬ್ಯುಲೆನ್ಸ್ ನಿಲ್ಲಿಸಿ ಲಾಕ್ ಮಾಡಿ ಮನೆಗೆ ತೆರಳುತ್ತಿದ್ದರು. ದಿನಾಂಕ 19-12-2025 ರಂದು ರಾತ್ರಿ ಕೂಡಾ ಅದೇ ರೀತಿಯಲ್ಲಿ ಅಂಬ್ಯುಲೆನ್ಸ್ ಅನ್ನು ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿ, ಅಪಘಾತ ಸಂಬಂಧಿತ ತುರ್ತು ಕರೆ ಬಂದಲ್ಲಿ ಬದಲಿ ಚಾಲಕರ ಅನುಕೂಲಕ್ಕಾಗಿ ಅಂಬ್ಯುಲೆನ್ಸ್ ಕೀಲಿಯನ್ನು ವಾಹನದಲ್ಲೇ ಇಟ್ಟು ಮನೆಗೆ ತೆರಳಿದ್ದರು.

ಮರುದಿನ 20-12-2025 ರಂದು ಬೆಳಿಗ್ಗೆ ಮನೆಗಳಿಂದ ಬಂದು ಅಂಬ್ಯುಲೆನ್ಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದಾಗ, ಅಂಬ್ಯುಲೆನ್ಸ್ ಕಳವಾಗಿರುವುದು ಕಂಡುಬಂದಿದೆ. ಈ ಕುರಿತು ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 117/2025, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 303(2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ತನಿಖೆಯ ವೇಳೆ ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ, ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋದನ್ (22) ಎಂಬಾತನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಬಳಿಕ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವಾಗಿದ್ದ ಅಂಬ್ಯುಲೆನ್ಸ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments