ಅಕ್ರಮ ದನ ಸಾಗಾಟ ಪತ್ತೆ: ಪೊಲೀಸರು ತಡೆದ ಕಾರಿನಿಂದ 4 ದನಗಳು ರಕ್ಷಣೆ, ಆರೋಪಿಗಳು ಪರಾರಿ
ಮಂಗಳೂರು: ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಿಸುತ್ತಿದ್ದ ಕಾರನ್ನು ಪೊಲೀಸರು ತಡೆದು ಪರಿಶೀಲಿಸಿದ ವೇಳೆ ಆರೋಪಿಗಳು ಸ್ಥಳದಿಂದ ಪರಾರಿಯಾದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಬುಧವಾರ ಬೆಳಗ್ಗೆ ಸುಮಾರು 4:30 ಗಂಟೆ ವೇಳೆಗೆ ಶಾಸ್ತಾವು ಶ್ರೀ ಭೂತನಾಥೇಶ್ವರ ದೇವಸ್ಥಾನದ ಬಡಗ ಎಡಪದವು ಗ್ರಾಮದ ಬಳಿ ಬಜರಂಗದಳ ಸಂಘಟನೆಯ ಮಾಹಿತಿ ಆಧರಿಸಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದರು.
ಈ ವೇಳೆ ಕಾರಿನೊಳಗೆ ಹಿಂಸಾತ್ಮಕ ರೀತಿಯಲ್ಲಿ 4 ದನಗಳನ್ನು ಸಾಗಿಸುತ್ತಿರುವುದು ಪತ್ತೆಯಾಯಿತು. ಪೊಲೀಸರು ವಾಹನವನ್ನು ತಡೆದ ತಕ್ಷಣ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.
ಇನ್ನಷ್ಟು ಪರಿಶೀಲನೆ ನಡೆಸಿದ ವೇಳೆ ಫಾರ್ಚುನರ್ ಕಾರಿನಲ್ಲಿ ಮಾರಕಾಯುಧವೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












