ಅಭಿವೃದ್ಧಿ ಕಾರ್ಯಗಳಲ್ಲಿ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡದು – ಮಾಧವ ಬನ್ನಂಜೆ
ಉಡುಪಿ: ಕೊಡವೂರು ಲಕ್ಷ್ಮೀನಗರದ ಗರ್ಡೆಯಲ್ಲಿ ನಗರಸಭಾ ಅನುದಾನದಿಂದ ಮಾಡಲು ಹೊರಟಿರುವ ಸಿರಿಕುಮಾರ ಕೆರೆ ಅಭಿವೃದ್ಧಿಗೆ ಕಾಂಗ್ರೆಸ್ ಮುಖಂಡ ತಡೆ ಒಡ್ಡಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವ ವಿಚಾರ ಸತ್ಯಕ್ಕೆ ದೂರವಾದದ್ದು ಎಂದು ಕಾಂಗ್ರೆಸ್ ಮುಖಂಡ ಮಾಧವ ಬನ್ನಂಜೆಯವರು ತಿಳಿಸಿದ್ದಾರೆ.
ನಗರಸಭೆಯ ಅನುಮೋದನೆ ಪಡೆದು ಕಾನೂನುಬದ್ಧವಾಗಿ ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ನಡೆಸಲು ತೊಡಕು ಉಂಟಾದಲ್ಲಿ ಅದನ್ನು ನಿವಾರಿಸುವ ಹೊಣೆಗಾರಿಕೆ ನಗರಸಭೆಯದ್ದಾಗಿದೆ.
ಕ್ಷೇತ್ರದ ಶಾಸಕರು ಹಾಗೂ ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು ಈ ಕಾಮಗಾರಿಗೆ ತರಾತುರಿಯಲ್ಲಿ ಗುದ್ದಲಿಪೂಜೆ ಮಾಡಿ ವ್ಯಾಪಕ ಪ್ರಚಾರ ಪಡೆದು ಇದೀಗ ಕೆಲಸ ಪ್ರಾರಂಭಿಸಲು ಗುತ್ತಿಗೆದಾರರು ಮೀನಮೇಷ ಎಣಿಸುತ್ತಿರುವ ನಿಟ್ಟಿನಲ್ಲಿ ಕೆರೆ ಅಭಿವೃದ್ಧಿಯ ಕಾಮಗಾರಿ ಸ್ಥಗಿತಗೊಂಡಿರುವ ವಿಚಾರ ಲಕ್ಷ್ಮೀನಗರ ಗರ್ಡೆ ಪರಿಸರದ ಎಲ್ಲಾ ನಿವಾಸಿಗಳಿಗೆ ತಿಳಿದಿರುತ್ತದೆ.
ಕೆರೆ ಅಭಿವೃದ್ಧಿಯ ಕಾಮಗಾರಿಗೆ ತೊಂದರೆ ಉಂಟು ಮಾಡುತ್ತಿರುವುದರಿಂದ ತಮಗೆ ಬೇಸರವಾಗಿದೆ ಎಂದು ಹೇಳುತ್ತಿರುವ ನಗರಸಭಾ ಸದಸ್ಯ ವಿಜಯ ಕೊಡವೂರು ರವರು ನಗರಸಭೆಯಲ್ಲಿ ತಮ್ಮದೇ ಪಕ್ಷದ ಆಡಳಿತ,ತಮ್ಮ ಪಕ್ಷದ ಶಾಸಕರು ಇರುವಾಗ ಕಾಮಗಾರಿಯನ್ನು ನಡೆಸಲು ಇರುವ ತೊಂದರೆಯನ್ನು ನಿವಾರಿಸಿಕೊಂಡು ಕಾಮಗಾರಿ ಮುಂದುವರಿಯುವಂತೆ ಮಾಡಲಿ.ಅದನ್ನು ಬಿಟ್ಟು ಕೈಯಲ್ಲಿ ಆಗದವ ಮೈಯೆಲ್ಲಾ ಪರಚಿಕೊಂಡಂತೆ ಬೇರೆಯವರ ಮೇಲೆ ಆರೋಪ ಹೊರಿಸುವುದನ್ನು ನಿಲ್ಲಿಸಲಿ.
ಮಾಜಿ ನಗರಸಭಾಧ್ಯಕ್ಷೆಯ ಪತಿ ಕಾಂಗ್ರೆಸ್ ಮುಖಂಡನಿಂದ ಕೆರೆ ಅಭಿವೃದ್ಧಿಯ ಕಾಮಗಾರಿಗೆ ಅಡ್ಡಿ ಎಂದು ಆರೋಪಿಸುವವರಿಗೆ ತಾನು ಯಾವುದೇ ರೀತಿಯಲ್ಲಿ ಈ ಕಾಮಗಾರಿಗೆ ತಡೆ ಒಡ್ಡಿಲ್ಲ ಎಂದು ಯಾವುದೇ ಕಾರಣಿಕದ ದೇವಸ್ಥಾನ ಅಥವಾ ದೈವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧನಿರುವುದಾಗಿ ಕಾಂಗ್ರೆಸ್ ಮುಖಂಡ ಮಾಧವ ಬನ್ನಂಜೆಯವರು ಸುಳ್ಳು ಆರೋಪ ಮಾಡುವವರಿಗೆ ನೇರ ಸವಾಲು ಒಡ್ಡುವುದಾಗಿ ತಿಳಿಸಿದ್ದಾರೆ.
ವಾರ್ಡಿನ ಸಮಗ್ರ ಅಭಿವೃದ್ಧಿಯ ವಿವರಣೆ, ಅಭಿವೃದ್ಧಿ ಕೆಲಸಗಳಿಗೆ ಕೈ ಜೋಡಿಸಲಿ ಎಂದು ಉಪದೇಶ ನೀಡುವ ನಗರಸಭಾ ಸದಸ್ಯ ವಿಜಯ ಕೊಡವೂರು ರವರು ಚುನಾವಣೆ ಸಮೀಪಿಸುವಾಗ ಮಾಡುವ ಚಿಲ್ಲರೆ ರಾಜಕೀಯ, ಇನ್ನೊಬ್ಬರ ಮೇಲೆ ವೃಥಾ ಆರೋಪ ಹಾಗೂ ಸುಳ್ಳು ಸುದ್ದಿಯನ್ನು ಹಬ್ಬಿಸುವ ಚಾಳಿಯನ್ನು ಬಿಟ್ಟು ರಾಜಕೀಯ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಕೊಡವೂರು ವಾರ್ಡಿನ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಮಾಧವ ಬನ್ನಂಜೆಯವರು ತಿಳಿಸಿದರು.













