ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ :ಸಾಲ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Spread the love

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ :ಸಾಲ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಂಗಳೂರು:  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಂದ ಕೆಳಕಂಡ ಯೋಜನೆಗಳಿಗೆ 2025-26ನೇ ಸಾಲಿನಲ್ಲಿ ಸಾಲ ಸಹಾಯಧನ ಸೌಲಭ್ಯ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೆಬ್‍ಸೈಟ್ https://kmdconline.karnataka.gov.in  ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿದಾರರು ತಹಶೀಲ್ದಾರರರಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ರೂ.6 ಲಕ್ಷಗಳನ್ನು ಮೀರಿರಬಾರದು. ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಮತ್ತು ವಾಸದ ದೃಢೀಕರಣಕ್ಕಾಗಿ ಪಡಿತರ ಚೀಟಿಯನ್ನು ಹೊಂದಿರಬೇಕು. ಅರ್ಜಿದಾರರ ಬ್ಯಾಂಕ್ ಖಾತೆ ಆಧಾರ್‍ನೊಂದಿಗೆ ಜೋಡಣೆಯಾಗಿರಬೇಕು. ಅರ್ಜಿದಾರರ ವಯೋಮಿತಿ 18 ರಿಂದ 55 ವರ್ಷಗಳು, ಹಾಗೂ ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ರಾಜ್ಯ/ಕೇಂದ್ರ ಸರ್ಕಾರದ ಉದ್ಯೋಗಿಯಾಗಿರಬಾರದು. ನಿಗಮದ ಇತರ ಯೋಜನೆಗಳಡಿಯಲ್ಲಿ ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ನಿಗಮದಿಂದ ಈಗಾಗಲೇ ಸಾಲ ಸೌಲಭ್ಯ ಪಡೆದಿರಬಾರದು ಹಾಗೂ ವಿವಿಧ ಯೋಜನೆಗಳಿಗೆ ಅನುಗುಣವಾಗಿ ದಾಖಲಾತಿಗಳನ್ನು ಒದಗಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಅಕ್ಟೋಬರ್ 16.

2025-26ನೇ ಸಾಲಿನ ವಿವಿಧ ಯೋಜನೆಗಳ ವಿವರ:

  • ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ಪ್ರೋತ್ಸಾಹ ಯೋಜನೆ: ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ಸಲುವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಅಗತ್ಯವಿರುವ ದುಡಿಯುವ ಬಂಡವಾಳ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ನಿಗಮದಿಂದ ರೂ.2 ಲಕ್ಷದವರೆಗೆ ಸಾಲ ಶೇಕಡಾ 50% ರಷ್ಟು ಸಹಾಯಧನವನ್ನು ಶೇಕಡಾ 4% ರ ಬಡ್ಡಿ ದರದಲ್ಲಿ ಒಗದಿಸಲಾಗುತ್ತದೆ. ಅರ್ಜಿದಾರರನ್ನು ಅರ್ಹತೆಯನುಸಾರ ರೇಷ್ಮೆ ಇಲಾಖೆ ಜೊತೆ ಸಮಾಲೋಚಿಸಿ ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುತ್ತದೆ.
  • ಮಹಿಳಾ ಸ್ವಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಸಹಾಯಧನ ಯೋಜನೆ: ಈ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಸ್ವಸಹಾಯ ಗುಂಪುಗಳಿಗೆ ವಿವಿಧ ರೀತಿಯ ಸ್ವಯಂ ಉದ್ಯೋಗ ಚಟುವಟಿಕೆಯಲ್ಲಿ ತೊಡಗಿಸಿ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ, ರಾಷ್ಟ್ರೀಕೃತ/ಶೆಡ್ಯೂಲ್ ಬ್ಯಾಂಕ್/ಆರ್.ಬಿ.ಐ ನಿಂದ ಮಾನ್ಯತೆ ಪಡೆದ ವಿವಿಧ ಆರ್ಥಿಕ ಸಂಸ್ಥೆಗಳಿಂದ ಪಡೆಯುವ ಸಾಲಕ್ಕೆ ಘಟಕ ವೆಚ್ಚದ ಶೇ.50% ಅಥವಾ ಗರಿಷ್ಟ ರೂ.2 ಲಕ್ಷ ಸಹಾಯಧನವನ್ನು ನಿಗಮದಿಂದ ಒದಗಿಸಲಾಗುತ್ತದೆ. ಸಹಾಯಧನವು ಬ್ಯಾಕ್ ಎಂಡ್ ಸಬ್ಸಿಡಿಯಾಗಿದ್ದು ಸ್ವಸಹಾಯ ಸಂಘಗಳು ಆರ್ಥಿಕ ಬ್ಯಾಂಕ್‍ಗಳಿಂದ ಪಡೆದ ಸಾಲದ ಮರುಪಾವತಿಗೆ ಹೊಂದಾಣಿಕೆ ಮಾಡಲಾಗುತ್ತದೆ. ಸಂಘದ ಗುಂಪಿನ ಸದಸ್ಯರ ಸಂಖ್ಯೆ 10 ರಿಂದ 20 ರೊಳಗಿರಬೇಕು. ಒಂದು ಕುಟುಂಬದ ಒಬ್ಬರು ಸದಸ್ಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಸ್ವಸಹಾಯ ಸಂಘವು ಕಡ್ಡಾಯವಾಗಿ ಉಪನೋಂದಣಾಧಿಕಾರಿಯವರಿಂದ ನೋಂದಣಿಯಾಗಿರಬೇಕು. ನಿಗಮದ ಸಹಾಯಧನ ಪಡೆಯಲು ಸ್ವಸಹಾಯ ಗುಂಪು ರಚನೆಯಾಗಿ ಕನಿಷ್ಟ 6 ತಿಂಗಳಾಗಿರಬೇಕು.
  • ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿಶ್ವವಿದ್ಯಾಲಯದಿಂದ ಪದವಿ/ಸ್ನಾತಕೋತ್ತರ ಪದವಿ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಗರಿಷ್ಟ ರೂ.20 ಲಕ್ಷಗಳವರೆಗೆ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುತ್ತದೆ. ನಿಗಮಕ್ಕೆ ಆಸ್ತಿಯ (ಕಟ್ಟಡ/ಜಮೀನು) ಅಡಮಾನದ ಮೇಲೆ ಮಾತ್ರ ಸಾಲ ಒದಗಿಸಲಾಗುತ್ತದೆ ಹಾಗೂ ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು. ಸಾಲದ ಮೊತ್ತವನ್ನು ವಿದ್ಯಾರ್ಥಿಯು ಭಾರತದಲ್ಲಿ ಹೊಂದಿರುವ ಬ್ಯಾಂಕ್ ಖಾತೆಗೆ ವರ್ಷಕ್ಕೆ ಒಂದು ಕಂತು ಬಿಡುಗಡೆ ಮಾಡಲಾಗುತ್ತದೆ. ವಿದ್ಯಾಭ್ಯಾಸ ಮುಗಿದ 6 ತಿಂಗಳ ನಂತರ ನಿಗದಿಪಡಿಸಿದ 60 ತಿಂಗಳ ಸಮಾನ ಕಂತುಗಳಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗಿದೆ. ಒಂದು ವೇಳೆ ಸಕಾಲಕ್ಕೆ ನಿಗಮಕ್ಕೆ ಮರುಪಾವತಿ ಮಾಡದೇ ಸುಸ್ಥಿದಾರರಾದಲ್ಲಿ ಸುಸ್ಥಿಯಾದ ಮೊತ್ತದ ಶೇಕಡಾ 2% ರಷ್ಟು ದಂಡ ಬಡ್ಡಿಯನ್ನು ವಿಧಿಸಲಾಗುತ್ತದೆ. ವಿದ್ಯಾರ್ಥಿಯ ವಯಸ್ಸು 38 ವರ್ಷಕ್ಕಿಂತ ಕಡಿಮೆಯಿದ್ದು ಹಿಂದಿನ ವರ್ಷದಲ್ಲಿ ಕನಿಷ್ಟ 60% ಅಂಕವನ್ನು ಪಡೆದಿರಬೇಕು.
  • ಶ್ರಮಶಕ್ತಿ ಯೋಜನೆ: ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕಲಕಸುಬುದಾರರಿಗೆ ತರಬೇತಿ ನೀಡಿ, ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ, ನಿಗಮದಿಂದ ಶೇಕಡಾ 4%ರ ಬಡ್ಡಿದರದಲ್ಲಿ ರೂ.50,000/- ಸಾಲ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ ಶೇ.50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ, ಉಳಿದ ಶೇ.50ರಷ್ಟು ಹಣವನ್ನು ಬ್ಯಾಕ್ ಎಂಡ್ ಸಹಾಯಧನವನ್ನಾಗಿ ಪರಿಗಣಿಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲನಾದಲ್ಲಿ ಶೇ.50ರಷ್ಟು ಬ್ಯಾಂಕ್ ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.
  • ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯಡಿ ಬ್ಯಾಂಕುಗಳು/ ಆರ್.ಬಿ.ಐ ಮಾನ್ಯತೆ ಪಡೆದ ವಿವಿಧ ಫೈನಾನ್ಸ್ ಸಂಸ್ಥೆಗಳು ಸಾಲ ಮಂಜೂರಾತಿ ನೀಡಿದ ಪ್ಯಾಸೆಂಜರ್ ಆಟೋರಿಕ್ಷಾ ವಾಹನವನ್ನು ಖರೀದಿಸಲು ವಾಹನದ ಆನ್‍ರೋಡ್ ಪ್ರೈಸ್ ಮೇಲೆ ಕನಿಷ್ಟ ಶೇ.50 ರಷ್ಟು (ಗರಿಷ್ಟ ರೂ. 75,000) ಸಹಾಯಧನ  ಅಥವಾ ಗೂಡ್ಸ್ ವಾಹನ/ಟ್ಯಾಕ್ಸಿ, ಕಾರು ಖರೀದಿಸಲು ಶೇ.50%ರಷ್ಟು ಸಹಾಯಧನ (ಗರಿಷ್ಟ ರೂ.3 ಲಕ್ಷ) ನೀಡಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಆಯ್ಕೆಯಾದ ಫಲಾನುಭವಿಗಳು ವಾಹನದ ಆನ್‍ರೋಡ್ ಪ್ರೈಸ್ ಮೇಲೆ ಕನಿಷ್ಟ ಶೇ.10ರಷ್ಟು ಮೊತ್ತವನ್ನು ತಮ್ಮ ಪಾಲಿನ ವಂತಿಗೆಯಾಗಿ ಸಂಬಂಧಿಸಿದ ಬ್ಯಾಂಕುಗಳಿಗೆ ಪಾವತಿಸಬೇಕು.
  • ವೃತ್ತಿ ಪ್ರೋತ್ಸಾಹ ಯೋಜನೆ: ಈ ಯೋಜನೆಯಡಿ ಹಣ್ಣು ಹಂಪಲು, ಕೋಳಿ ಮತ್ತು ಮೀನು ಮಾರಾಟ, ಎಳನೀರು, ಕಬ್ಬಿನ ಹಾಲು, ತಂಪು ಪಾನೀಯ ಮಾರಾಟ, ಬೇಕರಿ, ಲಾಂಡ್ರಿ, ಡ್ರೈಕ್ಲೀನಿಂಗ್, ಹೇರ್ ಡ್ರೆಸಿಂಗ್ ಸಲೂನ್, ಬ್ಯೂಟಿ ಪಾರ್ಲರ್, ವಾಟರ್ ವಾಷ್, ಪಂಚರ್ ಶಾಪ್, ಮೆಕ್ಯಾನಿಕ್ ಶಾಪ್, ದ್ವಿಚಕ್ರ ತ್ರಿಚಕ್ರ ವಾಹನ ರಿಪೇರಿ, ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ ರಿಪೇರಿ, ರೆಫ್ರಿಜರೇಟರ್ ಮೋಟಾರ್ ರಿವೈಂಡಿಂಗ್ ವಕ್ರ್ಸ್, ಬಿದರಿ ವೇರ್ ಕೆಲಸ, ರೇಷ್ಮೆ ರೀಲಿಂಗ್ ಮತ್ತು ಟ್ವಿಸ್ಟಿಂಗ್, ಆಟಿಕೆ ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡಿಸಲು ನಿಗಮದಿಂದ ಶೇಕಡಾ.50% ರಷ್ಟು ಸಹಾಯಧನದೊಂದಿಗೆ ರೂ.1 ಲಕ್ಷಗಳ ಸಾಲವನ್ನು ಶೇಕಡಾ 4% ಬಡ್ಡಿದರಲ್ಲಿ ನೀಡಲಾಗುತ್ತದೆ.
  • ನೇರಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ವ್ಯಾಪಾರ/ಉದ್ದಿಮೆ ಚಟುವಟಿಕೆ ಕೈಗೊಳ್ಳಲು ಬಯಸುವ 18 ರಿಂದ 55 ವರ್ಷದೊಳಗಿನ ನಿರುದ್ಯೋಗಿಗಳಿಗೆ ರೂ.20. ಲಕ್ಷವರೆಗೆ ಶೇ.4% ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ. ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನ ಮೇಲೆ ಮಾತ್ರ ಸಾಲವನ್ನು ಒದಗಿಸಲಾಗುತ್ತದೆ. ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆಯಿರಬಾರದು. ವ್ಯಾಪಾರ ಉದ್ದಿಮೆ ಸಾಲವನ್ನು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ನೀಡಲಾಗುತ್ತದೆ.
  • ಸಾಂತ್ವನ ಯೋಜನೆ: ಕೋಮು ಗಲಭೆ ಮತ್ತು ಕೋಮು ಹಿಂಸಾಚಾರದ ಸಂದರ್ಭದಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಟ ರೂ.2 ಲಕ್ಷ ನಷ್ಟವಾಗಿದ್ದರೆ ಅಂತಹ ವಿಶೇಷ/ದುರ್ಬಲ ವರ್ಗದ ಫಲಾನುಭವಿಗಳಿಗೆ ಸಾಂತ್ವನ ಯೋಜನೆಯಡಿ ಗರಿಷ್ಟ ರೂ5 ಲಕ್ಷಗಳ ಘಟಕ ವೆಚ್ಚಕ್ಕೆ ಶೇಕಡಾ 50 ರಷ್ಟು ಸಹಾಯಧನ ಮತ್ತು ಶೇ.3ರ ಬಡ್ಡಿ ದರದಲ್ಲಿ ಶೇಕಡಾ 50ರಷ್ಟು ಸಾಲವನ್ನು ನೀಡಲಾಗುತ್ತದೆ.

ನಗರದ ಪಾಂಡೇಶ್ವರ ಮೌಲಾನಾ ಅಜಾದ್ ಭವನದ 2ನೇ ಮಹಡಿಯ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂರವಾಣಿ ಸಂಖ್ಯೆ: 0824-2951644 ಸಂರ್ಪಕಿಸಬಹುದು ಅಥವಾ 1)ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ,ಕೆಳಗಿನ ಮಹಡಿ,ಭಾರತ್ ಕಮರ್ಶಿಯಲ್ ಕಾಂಪ್ಲೆಕ್ಸ್, ಬಿ.ಸಿ.ರೋಡು ಬಂಟ್ವಾಳ ದೂರವಾಣಿ ಸಂಖ್ಯೆ:08255-232470, 2) ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣ ಕಟ್ಟಡ, ತಾಲೂಕು ಪಂಚಾಯತ್ ಹತ್ತಿರ, ಬೆಳ್ತಂಗಡಿ ದೂರವಾಣಿ ಸಂಖ್ಯೆ:08256-295335. 3) ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ತಾಲೂಕು ಪಂಚಾಯತ್ ಸಾಮಥ್ರ್ಯ ಸೌಧ ಕಟ್ಟಡ, ಪುತ್ತೂರು ತಾಲೂಕು ದೂರವಾಣಿ ಸಂಖ್ಯೆ:08251-237078 , 4) ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಪಂಚಾಯತ್ ಕಟ್ಟಡ,ಕೆ.ಸಿ ರೋಡ್ ಸುಳ್ಯ ದೂರವಾಣಿ ಸಂಖ್ಯೆ: 028257-230666 ಅಥವಾ ಸಹಾಯವಾಣಿ ಸಂಖ್ಯೆ: 8277799990 ಸಂರ್ಪಕಿಸಬಹುದು ಎಂದು ಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments