ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ರೈತರಿಂದ ದ.ಕ. ಡಿಸಿ ಕಚೇರಿ ಮುಂದೆ ಧರಣಿ

Spread the love

ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ರೈತರಿಂದ ದ.ಕ. ಡಿಸಿ ಕಚೇರಿ ಮುಂದೆ ಧರಣಿ

ಮಂಗಳೂರು: ಉಡುಪಿ-ಕಾಸರಗೋಡು 400 ಕೆವಿ. ವಿದ್ಯುತ್ ಲೈನ್ ಯೋಜನೆ ಕಾಮಗಾರಿ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿ ಮತ್ತುವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು, ಸಂತ್ರಸ್ತರು ಗುರುವಾರ ದ.ಕ. ಜಿಲ್ಲಾ ಕಚೇರಿ ಮುಂದೆ ಧರಣಿ ನಡೆಸಿದರು.

ರೈತರಿಗೆ ಬದುಕನ್ನು ನಿರ್ನಾಮಗೊಳಿಸುವ ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ, ರೈತರಿಗೆ ನ್ಯಾಯ ಒದಗಿಸಲು ಉಭಯ ಜಿಲ್ಲೆಗಳ ಸಂಸದರು, ಶಾಸಕರುಗಳು, ಜಿಲ್ಲಾಧಿಕಾರಿಗಳು ಹಾಗೂ ಕಂಪೆನಿಯ ಅಧಿಕಾರಿಗಳ ಕರೆಯುವಂತೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಮುಂದೆ ಸುಮಾರು ಒಂದು ಗಂಟೆ ಕಾಲ ಮೌನವಾಗಿ ಧರಣಿ ನಡೆಸಿದ ಸಂತ್ರಸ್ತರು ಜಿಲ್ಲಾಧಿಕಾರಿ ಅವರಲ್ಲಿ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಯಾವುದೇ ಧರಣಿ ಹಾಗೂ ಪ್ರತಿಭಟನೆಗೆ ಅನುಮತಿ, ಅವಕಾಶ ಇಲ್ಲದಿದ್ದರೂ ರೈತರು ನೇರ ವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಅಹವಾಲು ಸಲ್ಲಿಸಿದ್ದರು.

ಸ್ಥಳಕ್ಕೆ ಆಗಮಿಸಿದ ದ.ಕ. ಜಿಲ್ಲಾಧಿಕಾರಿ ಮುಲೈ ಮುಗಿಲನ್ ಎಂಪಿ ಅವರು ಧರಣಿ ನಿರತ ಸಂತಸ್ತರೊಂದಿಗೆ ಮಾತುಕತೆ ನಡೆಸಿದರು. ನಿಡೋಡಿ ಕೊಲತ್ತಾರುವಿನಲ್ಲಿ ವಿದ್ಯುತ್ ಟವರ್ ಕಾಮಗಾರಿ ನಿರ್ಮಿಸದಂತೆ ಜಿಲ್ಲಾಧಿಕಾರಿ ಆದೇಶ ಮಾಡು ವಂತೆ ಆಗ್ರಹಿಸಿದರು. ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಜಿಲ್ಲಾ ಸಂಯೋಜಕ ದಯಾನಂದ ಶೆಟ್ಟಿ ಕಾರ್ಯದರ್ಶಿ ಮನೋಹರ್ ಶೆಟ್ಟಿ, 440 ಕೆ.ವಿ. ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಜು ಗೌಡ, ಏಳಿಂಜೆ ವಲಯ ಅಧ್ಯಕ್ಷ ಸುಕೇಶ್ಚಂದ್ರ ಶೆಟ್ಟಿ, ನಿಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಲೋನ್ಸ್ ಲೋಬೊ . ಸಂತ್ರಸ್ತೆ ಕೌಶಲ್ಯ ಎಂ ಶೆಟ್ಟಿ ಏಳಿಂಜೆ, ಪ್ರಮುಖರಾದ ಚಿತ್ತರಂಜನ್ ಪೂಜಾರಿ, ಉದಯ ಕಂಬಳಿ,ಶಿವಚಂದ್ರ, ಅಣ್ಣುಗೌಡ ಮಂಜಲಾಡಿ, ಚಂದ್ರಹಾಸ ಶೆಟ್ಟಿ, ಶೇಕಬ್ಬ ಕುಪ್ಪೆಪದವು ಅವರು ಜಿಲ್ಲಾಧಿಕಾರಿಯವರಲ್ಲಿ ಮಾತುಕತೆ ನಡೆಸಿದರು.

ನಾವು ಯೋಜನೆಗಳ ವಿರೋಧಿಗಳಲ್ಲ. ಯೋಜನೆಯಿಂದ ಕೃಷಿ ಭೂಮಿ, ಅರಣ್ಯ ನಾಶವಾಗಬಾರರು. ರೈತರಿಗೆ ತೊಂದರೆ ಯಾಗದ ಜಾಗದಲ್ಲಿ ವಿದ್ಯುತ್ ಲೈನ್ ಕಾಮಗಾರಿ ಕೈಗೊಳ್ಳಲಿ. ಇದಕ್ಕೆ ಪರ್ಯಾಯ ಮಾರ್ಗ ಹುಡುಕಲು ಆಗ್ರಹಿಸಿದರು. ಈ ಸಂಬಂಧ ಚರ್ಚಿಸಲು ವಾರದ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸುವುದಾಗಿ ಅಷ್ಟರ ತನಕ ಕಾಮಗಾರಿ ನಿಲ್ಲಿಸಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಡಿಸಿ ಭರವಸೆ ನೀಡಿದ ಬಳಿಕ ಸಂತ್ರಸ್ತರು ಅಲ್ಲಿಂದ ತೆರಳಿದರು. ದ.ಕ. ಸಂಸದ ಬ್ರಿಜೇಶ್ ಚೌಟ ಕಚೇರಿಗೆ ತೆರಳಿದ ರೈತ ಮುಖಂಡರು ಸಂಸದರ ಅನುಪಸ್ಥಿತಿಯಲ್ಲಿ ಅವರ ಆಪ್ತ ಸಹಾಯಕರಲ್ಲಿ ಮಾತುಕತೆ ನಡೆಸಿದರು.

ದ.ಕ. ಜಿಲ್ಲಾಧಿಕಾರಿ ಹೇಳಿದ್ದು

ವಿದ್ಯುತ್ ಯೋಜನೆಗೆ ಸಂಬಂಧಿಸಿ ಹಿಂದೆ ರೈತರ ಸಭೆ ನಡೆಸಲಾಗಿದೆ. ಅಲ್ಲಿ ಕೈಗೊಂಡ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ.

* ಯೋಜನೆಯಿಂದ ಭೂಮಿ ಕಳೆದುಕೊಳ್ಳುವವರಿಗೆ ಕೇರಳದಲ್ಲಿ ಪರಿಹಾರ ನೀಡಿದಂತೆ ಕರ್ನಾಟಕದ ರೈತರಿಗೂ ನೀಡ ಬೇಕು ಎಂಬ ನಿಲುವಿಗೆ ಸರಕಾರ ಬದ್ಧವಾಗಿದೆ.

* ಪರ್ಯಾಯವಾಗಿ ನೀರಿನೊಳಗೆ, ಭೂಗತ ವ್ಯವಸ್ಥೆಯಲ್ಲಿ ಲೈನ್ ಎಳೆಯಬೇಕು ಎಂಬ ಬೇಡಿಕೆಯ ಬಗ್ಗೆ ನನಗೆ ಏನನ್ನು ಹೇಳಲು ಸಾಧ್ಯವಿಲ್ಲ.

* ಸಹಾಯಕ ಆಯಕ್ತರು ನೋಡಲ್ ಅಧಿಕಾರಿ. ಅವರು ವಾರದೊಳಗೆ ಸಭೆ ಕರೆಯಲಿದ್ದಾರೆ. ಅಷ್ಟರ ತನಕ ಕಾಮಗಾರಿ ಯನ್ನು ಸ್ಥಗಿತಗೊಳಿಸಲಾಗುವುದು. ಸಭೆಗೆ ಸಂಬಂಧಪಟ್ಟ ವಿದ್ಯುತ್ ಕಂಪೆನಿಯ ಅಧಿಕಾರಿಗಳು ಬರುತ್ತಾರೆ. ಅವರ ಮುಂದೆ ನಿಮ್ಮ ಬೇಡಿಕೆಯನ್ನು ತಿಳಿಸಿ ಎಂದರು


Spread the love
Subscribe
Notify of

0 Comments
Inline Feedbacks
View all comments