ಉಡುಪಿ: ನಗರದ ಕೆಎಂ ಮಾರ್ಗದಲ್ಲಿ ಕಾರ್ಯಾಚರಿಸುತ್ತಿದ್ದ ಎಸ್ಸಿಡಿಸಿಸಿ ಬ್ಯಾಂಕ್ನ ಶಾಖೆ ಕಿನ್ನಿಮೂಲ್ಕಿ ಮುಖ್ಯರಸ್ತೆಯ ವಿಶ್ವಾಸ್ ಲ್ಯಾಂಡ್ ಮಾರ್ಕ್ಗೆ ಸೋಮವಾರ ಸ್ಥಳಾಂತರಗೊಂಡಿದ್ದು, ಶಾಖೆಯನ್ನು ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹೊಸ ವ್ಯವಸ್ಥೆಯೊಂದಿಗೆ ನೂತನ ಕಟ್ಟಡದಲ್ಲಿ ಶಾಖೆ ಆರಂಭಗೊಂಡಿದೆ. 35 ಕೋಟಿ ರೂ. ಠೇವಣಾತಿ ಹಾಗೂ 7.5ರಿಂದ 8 ಕೋಟಿ ರೂ. ಸಾಲ ವ್ಯವಸ್ಥೆಯನ್ನು ಶಾಖೆ ಹೊಂದಿದೆ. ಗ್ರಾಹಕರೇ ಬಾಂಕ್ನ ಆಸ್ತಿ. ಹಿಂದೆ ಸಾಲ ಪಡೆಯುವವರನ್ನು ಹೀನವಾಗಿ ಕಾಣಲಾಗುತ್ತಿತ್ತು. ಇಂದು ಸಾಲ ಪಡೆಯುವವರು, ಠೇವಣಿದಾರರು ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣಲಾಗುತ್ತಿದೆ. ಸಾಲಗಾರರನ್ನು ಹುಡುಕಿಕೊಂಡು ಹೋಗಿ ಸಾಲ ನೀಡಲಾಗುತ್ತದೆ ಎಂದರು.
ನೂತನ ಕಟ್ಟಡಲ್ಲಿ ಕಾರ್ಯಚರಣೆ ನಡೆಸಲಿರುವ ಶಾಖೆ ಸಂಪೂರ್ಣ ಹಾವಾನಿಯಂತ್ರಿತವಾಗಿದ್ದು, ಗಣಕೀಕೃತ, ಏಕಗವಾಕಿ, ಆರ್ಟಿಜಿಎಸ್, ನೆಫ್ಟ್, ರೂಪೇ ಕಾರ್ಡ್ ಹಾಗೂ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಹೊಂದಿದೆ.
ದ.ಕ. ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಅಲೆವೂರು ಶ್ರೀಧರ ಶೆಟ್ಟಿ, ಎಸ್ಸಿಡಿಸಿಸಿ ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಬಾಬು ಬಿಲ್ಲವ, ನಿರ್ದೇಶಕರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಎಂ. ವಾದಿರಾಜ ಶೆಟ್ಟಿ, ರಾಜೇಶ್ ರಾವ್, ಶಾಖಾ ವ್ಯವಸ್ಥಾಪಕ ರವೀಂದ್ರ ಭಟ್ ಉಪಸ್ಥಿತರಿದ್ದರು.





















