ಉಡುಪಿ ಕೃಷ್ಣ ಮಠದಲ್ಲಿ ಸಪ್ತೋತ್ಸವಕ್ಕೆ ಚಾಲನೆ
ಉಡುಪಿ: ಕೃಷ್ಣ ಮಠದ ವಾರ್ಷಿಕ ಜಾತ್ರೆ ಎಂದೆಣಿಸಿದ ಸಪ್ತೋತ್ಸವ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಆರಂಭಗೊಂಡಿತು.

13ನೇ ಶತಮಾನದಲ್ಲಿ ಆಚಾರ್ಯ ಮಧ್ವರು ಮಕರ ಸಂಕ್ರಾಂತಿಯಂದು ಕೃಷ್ಣ ವಿಗ್ರಹ ಪ್ರತಿಷ್ಠಾಪಿಸಿದ್ದರು. ಅಂದಿನಿಂದ ಇಂದಿನವರೆಗೆ ಸಪ್ತೋತ್ಸವ ನಡೆಯುತ್ತಿದ್ದು, ಜ.15ರಂದು ನಡೆಯುವ ಹಗಲು ಉತ್ಸವ ‘ಚೂರ್ಣೋತ್ಸವ’ ಎಂದೇ ಪ್ರಸಿದ್ಧವಾಗಿದೆ.
ಬುಧವಾರ ಸಾಯಂಕಾಲ ಶ್ರೀಕೃಷ್ಣನ ಉತ್ಸವ ಮೂರ್ತಿಯನ್ನು ಸುವರ್ಣ ಪಲ್ಲಕ್ಕಿಯಲ್ಲಿರಿಸಿ ಮಧ್ವ ಸರೋವರದಲ್ಲಿ ತೆಪ್ಪೋತ್ಸವದ ಬಳಿಕ ರಥಬೀದಿಯಲ್ಲಿ ಮಹಾಪೂಜೆ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರು, ಗರುಡ ರಥದಲ್ಲಿ ಕೃಷ್ಣ ಮುಖ್ಯಪ್ರಾಣ ದೇವರ ರಥೋತ್ಸವ ನಡೆಸಲಾಯಿತು.
ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಭಂಡಾರಿಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು,ಪೇಜಾವರ ಕಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು,ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು,ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಉತ್ಸವದಲ್ಲಿ ಭಾಗವಹಿಸಿದ್ದರು
ಜ.14ರಂದು ಮಕರಸಂಕ್ರಾಂತಿಯಂದು ಸಾಯಂಕಾಲ ಶ್ರೀಕೃಷ್ಣ, ಮುಖ್ಯ ಪ್ರಾಣ ದೇವರಿಗೆ ಮಧ್ವ ಸರೋವರದಲ್ಲಿ ವೈಭವದ ತೆಪ್ಪೋತ್ಸವ ನಡೆಯಲಿದೆ. ಬಳಿಕ ರಥಬೀದಿಯಲ್ಲಿ ಬ್ರಹ್ಮರಥದಲ್ಲಿ ಕೃಷ್ಣನ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಸಣ್ಣರಥದಲ್ಲಿ ಮುಖ್ಯಪ್ರಾಣ ದೇವರು, ಗರುಡ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರೇಶ್ವರ ದೇವರ ಮೂರ್ತಿಗಳನ್ನಿಟ್ಟು ಅಷ್ಟ ಮಠಾಧೀಶರ ಸಹಿತ ಭಕ್ತರು ತೇರನ್ನು ಎಳೆಯಲಿದ್ದಾರೆ. ರಥೋತ್ಸವ ವಿಶೇಷ ಆಕರ್ಷಣೆಯಾಗಿ ಸುಡುಮದ್ದು ಪ್ರದರ್ಶನ ನಡೆಯಲಿದೆ.













