ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

Spread the love

ಉಡುಪಿ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ

ಉಡುಪಿ : ನಿತ್ಯವೂ ಅಪರಾಧ ಚಟುವಟಿಕೆಗಳು, ಸಂಚಾರಿ ನಿಯಮ ಉಲ್ಲಂಘನೆ ಹೀಗೆ ನಾನಾ ಅಪರಾಧಿಗಳ ಬೆನ್ನತ್ತುತ್ತಿದ್ದ ಪೊಲೀಸರು ಸೋಮವಾರ ಸ್ವಲ್ಪ ರಿಲಾಕ್ಸ್ ಮೂಡ್ನಲ್ಲಿದ್ದರು. ಕ್ರೀಡಾ ಸಮವಸ್ತ್ರ ಧರಿಸಿ ಉತ್ಸಾಹದಿಂದ ಆಟೋಟಗಳಲ್ಲಿ ತೊಡಗಿಕೊಳ್ಳಲು ಅಣಿಯಾಗಿದ್ದರು.

ಉಡುಪಿ ಜಿಲ್ಲೆಯ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಮೂರು ದಿನಗಳ ವಾರ್ಷಿಕ ಕ್ರೀಡಾ ಕೂಟಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಕ್ರೀಡಾಕೂಟ ಆರಂಭಕ್ಕೂ ಮೊದಲು ಪೊಲೀಸ್ ಸಿಬ್ಬಂದಿ ಪಥಸಂಚಲನ ನಡೆಸಿದರು.

ಜಿಲ್ಲಾ ಪೊಲೀಸ್ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿಂಧು ಬಿ ರೂಪೇಶ್ ಅವರು ಬಲೂನ್ ಹಾರಿ ಬಿಡುವುದರೊಂದಿಗೆ ಹಾಗೂ ಪಾರಿವಾಳ ಹಾರಿಬಿಡುವುದರ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸಿಂಧು ರೂಪೇಶ್ ಅವರು ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕ್ರೀಡೆ ಸಹಕಾರಿ. ಅಲ್ಲದೇ ಕ್ರೀಡೆಗಳು ಸಂಘಟನಾ ಶಕ್ತಿ ಹಾಗೂ ಒಗ್ಗಟ್ಟಿನ ಗುಣವನ್ನು ಬೆಳೆಸುತ್ತದೆ. ಏಕತಾನತೆಯಿಂದ ಹೊರಬರಲು ಕ್ರೀಡೆ ಸಹಕಾರಿ. ವಿವಿಧ ಕಡೆ ಕೆಲಸ ಮಾಡುವ ಸಿಬ್ಬಂದಿ ಪಂದ್ಯಾಟದ ಹಿನ್ನೆಲೆಯಲ್ಲಿ ಜತೆಗೂಡುವುದರಿಂದ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.

ಪಥಸಂಚಲನದಲ್ಲಿ ಆರು ತಂಡಗಳು ಭಾಗಿಯಾಗಿದ್ದು, ಡಿಎಆರ್ ಆರ್.ಎಸ್.ಐ ಸಹದೇವ ಎಸ್. ಯಮ್ಮೋಜಿ ಪ್ರಮಾಣ ವಚನ ಬೋಧಿಸಿದರು. ಡಿಎಆರ್ ಸಿಬ್ಬಂದಿ ಯೋಗೀಶ್ ನಾಯ್ಕ ಕ್ರೀಡಾ ಜ್ಯೋತಿ ಬೆಳಗಿಸಿದರು.

ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಕಮಿಷನರ್ ಟಿ. ಭೂಬಾಲನ್ ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸ್ವಾಗತಿಸಿದರು. ಎಎಸ್ಪಿ ಕುಮಾರಚಂದ್ರ ವಂದಿಸಿದರು. ಮನಮೋಹನ್ ರಾವ್ ನಿರೂಪಿಸಿದರು.


Spread the love