ವಿಕಲಚೇತನರಿಗೆ ಅವಕಾಶ ನೀಡಿ- ನ್ಯಾ.ಲತಾ

Spread the love

ವಿಕಲಚೇತನರಿಗೆ ಅವಕಾಶ ನೀಡಿ- ನ್ಯಾ.ಲತಾ

ಉಡುಪಿ: ವಿಕಲಚೇತನರಿಗೆ ಸಹಾನುಭೂತಿ ತೋರಿಸದೇ ಅವರಲ್ಲಿನ ಕೌಶಲ್ಯ, ಪ್ರತಿಭೆಯನ್ನು ಸಾಬೀತು ಮಾಡಲು ಸೂಕ್ತ ವೇದಿಕೆ ನಿರ್ಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ತಿಳಿಸಿದ್ದಾರೆ.

ಅವರು ಸೋಮವಾರ, ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನ(ಮಿನಿ ಹಾಲ್)ದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಜಿಲ್ಲೆ, ವಕೀಲರ ಸಂಘ (ರಿ) ಉಡುಪಿ, ವಿಕಲಚೇತನರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘ ಉಡುಪಿ ಮತ್ತು ವಿಕಲಚೇತನರ ಸಂಘಟನೆಗಳು ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳನ್ನು ನೀಡಿದೆ, ವಿಕಲಚೇತನರು ಇತರರಂತೆ ಸಮಾನವಾಗಿ ಜೀವನ ನಡೆಸಲು ವಿಶೇಷ ಸೌಲಭ್ಯಗಳನ್ನು ನೀಡುವಂತೆ ನಿರ್ದೇಶನ ನೀಡಿದೆ, ಅದರಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿರುವ ವಿಶೇಷ ಸೌಲಭ್ಯಗಳ ಪ್ರಯೋಜನವನ್ನು ವಿಕಲಚೇತನರು ಪಡೆಯುವಂತೆ ತಿಳಿಸಿದ ನ್ಯಾ. ಲತಾ ಅವರು, ವಿಕಲಚೇತನರಿಗೆ ಎಲ್ಲಾ ಕ್ಷೇತ್ರದಲ್ಲಿ ಅವಕಾಶ ನೀಡುವಂತೆ ಮತ್ತು ಅವರನ್ನು ಸಬಲರನ್ನಾಗಿ ಮಾಡುವಲ್ಲಿ ಎಲ್ಲಾ ಸಂಘ ಸಂಸ್ಥೆಗಳು ಸೇರಿದಂತೆ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು, ವಿಕಲಚೇತನ ಮಕ್ಕಳ ಪೋಷಕರು ತಮ್ಮ ಮಕ್ಕಳಿಗೆ ಸೂಕ್ತ ಪ್ರೋತ್ಸಾಹ ನೀಡಿ, ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಪ್ರೇರೇಪಿಸಬೇಕು ಎಂದು ಹೇಳಿದರು.

ವಿಶೇಷ ಸಾಧನೆ ಮಾಡಿದ ವಿಕಲಚೇತನರಾದ, ಮಣಿಪಾಲ ಅರುಣ ಕುಮಾರಿ (ಕಲಾಕ್ಷೇತ್ರ), ಕುಮಾರಿ ಸೌಜನ್ಯ (ಶಿಕ್ಷಣ, ಸಾಂಸ್ಕøತಿಕ ಮತ್ತು ಕ್ರೀಡೆ), ಕುಮಾರಿ ಭುವನಾ (ಕ್ರೀಡೆ), ಮಟ್ಟಿ ಲಕ್ಷ್ಮಿ ನಾರಾಯಣ ರಾವ್(ಸಮಾಜ ಸೇವೆ), ನೀಲಾಧರ ಶೆಟ್ಟಿಗಾರ್ (ಕ್ರಿಯಾಶೀಲ ಚಟುವಟಿಕೆ), ಅರುಣೋದಯ ವಿಶೇಷ ಶಾಲೆ( ಉತ್ತಮ ಸಂಸ್ಥೆ) ಇವರನ್ನು ಸನ್ಮಾನಿಸಲಾಯಿತು.

ವಿಕಲಚೇತನರಿಗೆ 1000 ಡ್ರೈವಿಂಗ್ ಲೈಸೆನ್ಸ್ ಕೊಡಿಸುವಲ್ಲಿ ಸಹಕರಿಸಿದ ಜಗದೀಶ್ ಭಟ್ ಮತ್ತು ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಅಂಕ ಗಳಿಸಿದ ಹಾಗೂ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.

ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಮತ್ತು ವಿವಾಹ ಪ್ರೋತ್ಸಾಹಧನ ವಿತರಿಸಲಾಯಿತು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ವಿಕಲಚೇತನರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದ್ದಿತು.

ಕಾರ್ಯಕ್ರಮದಲ್ಲಿ ಉಡುಪಿ ತಾ.ಪಂ.ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಡುಪಿ ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ವಿಕಲಚೇತನರ ಪೋಷಕರ ಒಕ್ಕೂಟದ ಅಧ್ಯಕ್ಷ ಜೈ ವಿಠಲ್, ವಿಕಲಚೇತನರ ಒಕ್ಕೂಟದ ಅಧ್ಯಕ್ಷ ವಿಲ್ಫೆಡ್ ಗೋಮ್ಸ್, ತಾಲೂಕು ವಿಕಲಚೇತನರ ಒಕ್ಕೂಟದ ಮಂಜುನಾಥ ಹೆಬ್ಬಾರ್ ಉಪಸ್ಥಿತರಿದ್ದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಅಧಿಕಾರಿ ನಿರಂಜನಭಟ್ ಸ್ವಾಗತಿಸಿ, ನಿರೂಪಿಸಿದರು, ವಿಜೇತ ವಿಶೇಷ ಮಕ್ಕಳ ಶಾಲೆಯ ಕಾಂತಿ ಹರೀಶ್ ವಂದಿಸಿದರು.


Spread the love