ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಶಾಸಕರಾದ ಹಾಲಾಡಿ, ಸುನೀಲ್ ಮಿಸ್ಸಿಂಗ್!

ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಶಾಸಕರಾದ ಹಾಲಾಡಿ, ಸುನೀಲ್ ಮಿಸ್ಸಿಂಗ್!

ಉಡುಪಿ: ಉಡುಪಿ ಜಿಲ್ಲಾ ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ರ ಪದಗ್ರಹಣ ಸೋಮವಾರ ನಗರದಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದಿದ್ದು, ಜಿಲ್ಲಾ ನಾಯಕರ ನಡುವಿನ ಮನಸ್ತಾಪ ಎದ್ದು ಕಂಡಿತು.

ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೂ ಸಹ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬಂದರೂ ಇಬ್ಬರು ಪ್ರಭಾವಿ ಶಾಸಕರು ಗೈರಾಗಿದ್ದು ಸಭೆಯಲ್ಲಿದ್ದವರಿಗೆ ಮುಜುಗರಕ್ಕೆ ಕಾರಣವಾಯಿತು.

ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಅವರು ಭಾಗವಹಿಸಿದರೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಕಾರ್ಕಳ ಶಾಸಕ ಸುನೀಲ್ ಕುಮಾರ್ ಗೈರಾಗಿದ್ದರು.

ರಾಜ್ಯದ ಬಿಜೆಪಿ ಸರಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಸುನೀಲ್ ಕುಮಾರ್ ಅವರಿಗೆ ಸಚಿವ ಹುದ್ದೆಗೆ ಆಕಾಂಕ್ಷಿಗಳಾಗಿದ್ದರೂ ಕೂಡ ಪಕ್ಷದ ಹೈಕಮಾಂಡ್ ಈ ಇಬ್ಬರೂ ಶಾಸಕರ ಬಗ್ಗೆ ಯಾವುದೇ ರೀತಿಯ ಆಸಕ್ತಿ ವಹಿಸಲಿಲ್ಲ ಎನ್ನುವ ಬೇಸರ ಅವರಲ್ಲಿತ್ತು ಎನ್ನಲಾಗಿದೆ. ಪದಗ್ರಹಣ ಸಮಾರಂಭದಲ್ಲಿ ಇಬ್ಬರಿಗೂ ಮೀಸಲಿಟ್ಟ ಕುರ್ಚಿಗಳು ಖಾಲಿಯಾಗಿದ್ದು ಕಾರ್ಯಕ್ರಮದ ಕೊನೆಯವರೆಗೆ ಕುರ್ಚಿ ಇಟ್ಟು ಆಯೋಜಕರು ಕಾಯುತ್ತಿದ್ದರು.