ಉನ್ನಾವೊ ಮತ್ತು ಕತುವಾ ಪ್ರಕರಣಗಳು ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಹಿಡಿದ ಕೈಗನ್ನಡಿ; ಎನ್.ಎಸ್.ಯು.ಐ

Spread the love

ಉನ್ನಾವೊ ಮತ್ತು ಕತುವಾ ಪ್ರಕರಣಗಳು ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಹಿಡಿದ ಕೈಗನ್ನಡಿ; ಎನ್.ಎಸ್.ಯು.ಐ

ಉಡುಪಿ; ಉನ್ನಾವೊ ಮತ್ತು ಕತುವಾ ಅತ್ಯಾಚಾರ ಪ್ರಕರಣಗಳು ದೇಶದ ಜನರಲ್ಲಿ ಮತ್ತೊಮ್ಮೆ ಆಘಾತಕ್ಕೆ ಕಾರಣವಾಗಿದ್ದು ಪ್ರಕರಣವನ್ನು ನಿರ್ಲಕ್ಷಿಸಿರುವ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯದ ಧೋರಣೆಯನ್ನು ಉಡುಪಿ ಜಿಲ್ಲಾ ಎನ್ ಎಸ್ ಯು ಐ ತೀವ್ರವಾಗಿ ಖಂಡಿಸಿದೆ.

ದೇಶದಲ್ಲಿ ನರೇಂದ್ರ ಮೋದಿಯವರು ಆಡಳಿತಕ್ಕೆ ಬಂದ ಬಳಿಕ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಮನೆಯಿಂದ ಹೊರಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸದಾ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ನೋಡುತ್ತಿರುವುದಾಗಿ ಬೊಗಳೆ ಬಿಡುವ ಬಿಜೆಪಿಗರ ನಿಜಬಣ್ಣ ಇಂತಹ ಘಟನೆಗಳೇ ನೈಜ ಉದಾಹರಣೆಯಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಬೇಟಿ ಬಚಾವೋ(ಹೆಣ್ಣುಮಕ್ಕಳ ರಕ್ಷಣೆ) ಮಾತುಗಳನ್ನು ಆಡಿದ್ದಾರೆ. ಆದರೆ ಅವರು ನುಡಿದಂತೆ ನಡೆಯುತ್ತಿಲ್ಲ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಮೋದಿ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ .

ಉತ್ತರಪ್ರದೇಶ ಮತ್ತು ಜಮ್ಮು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದ ಅತ್ಯಾಚಾರ ಹಾಗು ಕೊಲೆ ಪ್ರಕರಣದಿಂದಾಗಿ ದೇಶವೇ ತಲೆ ತಗ್ಗಿಸುವಂತಾಗಿದೆ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ದೇಶದಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ದೇಶದಾದ್ಯಂತ ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಅಸುರಕ್ಷಿತರಾಗಿದ್ದಾರೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ವಿಚಾರವಾಗಿದೆ.

ಸದಾ ತನ್ನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಬಗ್ಗೆ ಮಾತನಾಡುವ ದೇಶದ ಪ್ರಧಾನಿಯವರಿಗೆ ನಿಜವಾದ ಕಾಳಜಿ ಇದಲ್ಲಿ ಆ ಮಗುವಿಗೆ ನ್ಯಾಯ ಒದಗಿಸುವ ಕುರಿತು ಮಾತನಾಡಲಿ. ಅಲ್ಲದೆ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿ ಬದುಕವ ಹಕ್ಕನ್ನು ಕಲ್ಪಿಸುವ ಕುರಿತು ಕಾಳಜಿ ವಹಿಸಬೇಕು ಎಂದು ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿಆಲ್ಮೇಡಾ ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.


Spread the love