ಉಪ್ಪಿನಂಗಡಿ| ಅಕ್ರಮವಾಗಿ ಶೇಖರಿಸಿದ್ದ 4,175 ಲೀಟರ್ ಡೀಸೆಲ್ ಪತ್ತೆ: ಪ್ರಕರಣ ದಾಖಲು

Spread the love

ಅಕ್ರಮವಾಗಿ ಶೇಖರಿಸಿದ್ದ 4,175 ಲೀಟರ್ ಡೀಸೆಲ್ ಪತ್ತೆ: ಪ್ರಕರಣ ದಾಖಲು

ಉಪ್ಪಿನಂಗಡಿ: ಅಕ್ರಮವಾಗಿ ಶೇಖರಿಸಿದ್ದ ಸುಮಾರು 4,175 ಲೀಟರ್ ಡೀಸೆಲ್‌ನ್ನು ಪೊಲೀಸರು ಪತ್ತೆಹಚ್ಚಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ.

  

ಮಾರ್ಚ್ 9ರಂದು ರಾತ್ರಿ ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಡೀಸೆಲ್ ಅನ್ನು ಬ್ಯಾರೆಲ್ ಹಾಗೂ ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟಿರುವುದಾಗಿ ತಿಳಿದುಬಂದಿತ್ತು.

ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ವೃತ್ತ ನಿರೀಕ್ಷಕ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳೊಂದಿಗೆ ಪೊಲೀಸರು ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಜಗದೀಶ್ (35) ಎಂಬಾತನ ಮನೆಯ ಸಮೀಪದ ಶೆಡ್‌ನ್ನು ಪರಿಶೀಲನೆ ನಡೆಸಿದರು. ಈ ವೇಳೆ ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್‌ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 5 ಕ್ಯಾನ್‌ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ.

ಇದೇ ವೇಳೆ ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್‌ಗಳು, ಖಾಲಿ ಕ್ಯಾನ್‌ಗಳು ಹಾಗೂ ಇತರೆ ವಸ್ತುಗಳು ಕೂಡ ಪತ್ತೆಯಾಗಿವೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ಸುಮಾರು ₹3,50,000 ಎಂದು ತಿಳಿದುಬಂದಿದೆ.

ಈ ಕುರಿತು ಆರೋಪಿ ಜಗದೀಶ್‌ನನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಕ್ರಮವಾಗಿ ಡೀಸೆಲ್ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ಸಂಬಂಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 35/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 287 ಹಾಗೂ 3(5), ಅಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 3 ಮತ್ತು 7, ಹಾಗೂ ಪೆಟ್ರೋಲಿಯಂ ಕಾಯ್ದೆ 1934ರ ಕಲಂ 23 ಅನ್ವಯ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments