ಉಪ ಕಸುಬಾಗಿ ಲಾಭ ತರುವ ತಳಿ ಸ್ವರ್ಣಧಾರ ಕೋಳಿ: ರಾಮಚಂದ್ರ ನಾಯ್ಕ  

ಉಪ ಕಸುಬಾಗಿ ಲಾಭ ತರುವ ತಳಿ ಸ್ವರ್ಣಧಾರ ಕೋಳಿ: ರಾಮಚಂದ್ರ ನಾಯ್ಕ  

ಮಂಗಳೂರು : ನಾಟಿ ಕೋಳಿಗೆ ಹೋಲುವ ವಿಶೇಷ ತಳಿಯಾದ ಸ್ವರ್ಣಧಾರ ಕೋಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ತಳಿಯನ್ನು ಬೀದರ್‍ನಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಅಬಿವೃದ್ಧಿ ಪಡಿಸಿದೆ. ಸ್ವದೇಶಿ ತಳಿಗಳೊಂದಾದ ಸ್ವರ್ಣಧಾರ ಕೋಳಿಯು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಲಭ್ಯವಿದ್ದು ಆಸಕ್ತರಿಗೆ ಇತ್ತೀಚೆಗೆ ತರಬೇತಿಯ ಮೂಲಕ ವೈಜ್ಞಾನಿಕ ಕೋಳಿ ಸಾಕಣೆ ವಿಧಾನವನ್ನು ತಿಳಿಸಲಾಯಿತು.

ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಎ.ಟಿ. ರಾಮಚಂದ್ರ ನಾಯ್ಕರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಘಟ್ಟದಲ್ಲಿ ಪ್ರಚಲಿತವಾಗಿರುವ ಕೋಳಿಗಳಿಗೆ ಈಗ ಕರಾವಳಿಯ ಜನರಲ್ಲೂ ಸಹಾ ಸಾಕಣೆ ಮಾಡುವ ಆಸಕ್ತಿ ಹೆಚ್ಚುತ್ತಿದೆ ಎಂದು ಹೇಳಿದರು.

ಈ ಕೋಳಿ ಸಾಕಲು ಕೇವಲ ರೈತನಾಗಿರಬೇಕೆಂದಿಲ್ಲ, ಬೇಸಾಯಕ್ಕೆ ಕೃಷಿ ಭೂಮಿ ಇಲ್ಲದವರೂ ಸಹಾ ಈ ಕೋಳಿಯನ್ನು ಸಾಕಬಹುದಾಗಿದೆ. ತರಬೇತಿ ಕಾರ್ಯಾಗಾರದಲ್ಲಿ ಆಗಮಿಸಿದ ಯುವಕ-ಯುವತಿಯರು, ನಾಗರೀಕರು, ಮಹಿಳೆಯರು. ಜನಸಾಮಾನ್ಯರು, ಗೃಹಿಣಿಯರು, ಅವಿದ್ಯಾವಂತರು, ವೃದ್ಧರೂ ಕೂಡ ಕೋಳಿ ಸಾಕಣೆ ಮಾಡುವ ಆಸಕ್ತಿತೋರಿಸಿ ಪ್ರಯೋಜನ ಪಡೆದುಕೊಂಡರು. ಕೇವಲ ಮಾಂಸಕ್ಕಾಗಿ ಅಲ್ಲದೇ ಮೊಟ್ಟೆ ಮಾಡಲೂ ಸಹಾ ಯೋಗ್ಯವಾದ ಸ್ವರ್ಣಧಾರ ತಳಿಯು ಜನ ಸಾಮಾನ್ಯರಿಗೆ ವರದಾನವಾಗಿದೆಯೆಂದು ಡಾ. ಎ.ಟಿ. ರಾಮಚಂದ್ರ ನಾಯ್ಕ ಹೇಳಿದರು.

ಭಾರತೀಯ ವೈದ್ಯಕೀಯ ಸಂಶೋದನಾ ಮಂಡಳಿಯು ಪ್ರತೀ ವ್ಯಕ್ತಿಗೆ ವರ್ಷಕ್ಕೆ 10.8 ಕೆ.ಜಿ ಯಷ್ಟು ಕೋಳಿ ಮಾಂಸ ಮತ್ತು 180 ಮೊಟ್ಟೆಗಳನ್ನು ಸೇವಿಸಲು ಶಿಫಾರಸ್ಸು ಮಾಡಿದೆ. ಆದರೆ, ಪ್ರಸ್ಥುತ ಕ್ರಮವಾಗಿ 3.6 ಕೆ.ಜಿ ಮಾಂಸ ಹಾಗೂ 68 ರಷ್ಟು ಮೊಟ್ಟೆಗಳ ಲಭ್ಯತೆ ಇರುತ್ತದೆ. ಹಾಗಾಗಿ, ಆಸಕ್ತರಿಗೆ, ಕೋಳಿ ಸಾಕಣೆ ಮಾಡಲು ಉತ್ತೇಜನ ಕೊಡುವುದು ಕೃಷಿ ವಿಜ್ಞಾನ ಕೇಂದ್ರದಿಂದ ನಡೆಸಲಾಗುತ್ತದೆ ಈ ಕೋಳಿಯು ಕೇವಲ 3 ತಿಂಗಳಿಗೆ ಸರಾಸರಿ 4 ರಿಂದ 5 ಕೆ.ಜಿ.ಯವರೆಗೆ ಬೆಳೆಯುವಂತಹ ಸಾಮಥ್ರ್ಯ ಹೊಂದಿದ್ದು ಇದರ ನಿದರ್ಶನಗಳೂ ಕೂಡ ಇದೆ. ಆದುದರಿಂದ ಈ ಕೋಳಿಗೆ ಬೇಡಿಕೆ ಹೆಚ್ಚಿತ್ತಿರುವುದನ್ನು ಗಮನಿಸಿದರೆ ಕೋಳಿ ಸಾಕಣೆಯು ಒಂದು ಲಾಭದಾಯಕ ಕಸುಬಾಗಿಸುವುದರಲ್ಲಿ ಯಾವುದೇ ಸಂಶಯವಿಲ್ಲವೆಂದು ಡಾ. ಎ.ಟಿ. ರಾಮಚಂದ್ರ ನಾಯ್ಕ ರವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು

ಕೋಳಿಗಳನ್ನು ಸಾಕುವುದು, ಮರಿಮಾಡುವುದು, ಆಹಾರ ನೀಡುವುದು, ಜೋಪಾಸಣೆ ಮಾಡುವುದು, ಕೋಳಿಗೆ ಸಹಜವಾಗಿ ತಗಲುವ ರೋಗಗಳ ನಿರ್ವಹಣೆ ಹಾಗೂ ಕೋಳಿಯಿಂದ ಹೊರಹುಮ್ಮುವ ತ್ಯಾಜ್ಯಗಳ ನಿರ್ವಹಣೆ ಮತ್ತು ಉಪಯೋಗಗಳ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಹಾಗೂ ಪಶು ವೈದ್ಯ ಡಾ. ವಸಂತ್ ಕುಮಾರ್ ಶೆಟ್ಟಿ ತಿಳಿಸಿಕೊಟ್ಟರು. ಕೋಳಿ ಮರಿ ಖರೀದಿಸುವವರು ಕೂಲಂಕುಷವಾಗಿ ಕಾರ್ಯಾಗಾರದಲ್ಲಿ ಮುಕ್ತ ಚರ್ಚೆಯಲ್ಲಿ ಭಾಗವಹಿಸಿದ್ದರು. ಪ್ರತಿಯಾಗಿ, ಸಲಹೆ ಸೂಚನೆಗಳನ್ನು ಸಂಪನ್ಮೂಲ ವ್ಯಕ್ತಿಯವರು ಮಾಹಿತಿ ನೀಡಿದರು.

ತರಬೇತಿಯ ನಂತರ ಬೇಡಿಕೆಯ ಮೇರೆಗೆ ಸರ್ಕಾರಿ ದರದಲ್ಲಿ ಕೋಳಿ ಮರಿಗಳನ್ನು ಮಾರಾಟ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.