ಎಕೆ.ಎಮ್.ಎಸ್ ಮ್ಹಾಲಕ ಸೈಫುದ್ದೀನ್ ಕೊಲೆ ಪ್ರಕರಣ: 6 ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಜಾರಿ
ಉಡುಪಿ: ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಗ್ರಾಮದ ನಾಗಬನದ ಸಮೀಪ ನಡೆದ ಸೈಯಿಪುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಸೇರಿ ಒಟ್ಟು ಆರು ಮಂದಿ ವಿರುದ್ಧ ಕೋಕಾ (KCOCA) ಕಾಯ್ದೆಯ ಸೆಕ್ಷನ್ 3 ಅನ್ನು ಅಳವಡಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಮೃತ ಸೈಯಿಪುದ್ದಿನ್ ಅವರ ಪುತ್ರ ಅಬ್ದುಲ್ ಅಂಜಿಲ್ ನೀಡಿದ ದೂರಿನಂತೆ, ದಿನಾಂಕ 27-09-2025 ರಂದು ಬೆಳಿಗ್ಗೆ ಫೈಜಲ್ ಖಾನ್ ಎಂಬಾತ ಮಣಿಪಾಲದ ಕಾಯಿನ್ ಸರ್ಕಲ್ ಬಳಿ ಇರುವ ಸೈಯಿಪುದ್ದಿನ್ ಅವರ ಮನೆಗೆ ಬಂದು, ಬಸ್ ವ್ಯವಹಾರ ಕುರಿತು ಮಾತನಾಡಲು ಮಂಗಳೂರಿಗೆ ಹೋಗಬೇಕಿದೆ ಎಂದು ಹೇಳಿ, ಬೆಳಿಗ್ಗೆ ಸುಮಾರು 10 ಗಂಟೆಗೆ ಕಾರಿನಲ್ಲಿ ಹೊರಟಿದ್ದಾನೆ.
https://www.facebook.com/reel/745744061904490
ನಂತರ ಫೈಜಲ್ ಖಾನ್ ಹಾಗೂ ಶರೀಫ್ ಸೇರಿದಂತೆ ಇತರರು ಸೇರಿಕೊಂಡು ಸೈಯಿಪುದ್ದಿನ್ ಅವರನ್ನು ಮಲ್ಲೆಗೆ ಕರೆದುಕೊಂಡು ಹೋಗಿ, ಬೆಳಿಗ್ಗೆ 10.15ರಿಂದ 11.30ರ ಮಧ್ಯೆ ಉಡುಪಿ ತಾಲೂಕು ಕೊಡವೂರು ಗ್ರಾಮದ ನಾಗಬನದ ಬಳಿ ಇರುವ (ಎಚ್.ಎ. ಮಂಜಿಲ್) ಮನೆಯಲ್ಲಿ ಮಚ್ಚಿನಿಂದ ತಲೆ ಮತ್ತು ಬೆನ್ನಿಗೆ ಹೊಡೆದು ಕೊಲೆ ನಡೆಸಿದ್ದಾರೆ ಎನ್ನಲಾಗಿದೆ. ಕೊಲೆಯ ಬಳಿಕ ಆರೋಪಿಗಳು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 108/2025 ಕಲಂ 103 ಹಾಗೂ 3(5) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು.
ಮಲ್ಪೆ ವೃತ್ತ ನಿರೀಕ್ಷಕ ಐ. ರಾಮಚಂದ್ರ ನಾಯಕ್ ಹಾಗೂ ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ಅವರ ನೇತೃತ್ವದ ತಂಡವು ದಿನಾಂಕ 28-09-2025 ರಂದು ಕೊಲೆ ನಡೆಸಿದ ಆರೋಪಿಗಳಾದ ಮಹಮದ್ ಫೈಸಲ್ ಖಾನ್ (27), ಮೊಹಮದ್ ಶರೀಫ್ (37) ಮತ್ತು ಅಬ್ದುಲ್ ಶುಕುರ್ (43) ಇವರನ್ನು ಬಂಧಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿ, ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ಕನೇ ಆರೋಪಿ ಶ್ರೀಮತಿ ರಿಧಾ ಶಭನಾ (27) ಅವರನ್ನು ದಿನಾಂಕ 04-10-2025 ರಂದು ಬಂಧಿಸಲಾಗಿದೆ.
ಅದೇ ರೀತಿ, ಆರೋಪಿಗಳಿಗೆ ಆಯುಧಗಳನ್ನು ಒದಗಿಸಿದ್ದ ಆರನೇ ಆರೋಪಿ ಮಾಲಿ ಮೊಹಮ್ಮದ್ ಸಿಯಾನ್ (31) ಅವರನ್ನು ದಿನಾಂಕ 15-12-2025 ರಂದು ದಸ್ತಗಿರಿ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕೋಕಾ ಕಾಯ್ದೆಯ ಸೆಕ್ಷನ್ 3 ಅನ್ನು ಎಲ್ಲಾ ಆರು ಆರೋಪಿಗಳ ವಿರುದ್ಧ ಅಳವಡಿಸಲಾಗಿದ್ದು, ಈ ಕಾಯ್ದೆಯಡಿ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹರಿರಾಮ್ ಶಂಕರ್ ತಿಳಿಸಿದ್ದಾರೆ.













