ಎನ್‌.ಪಿ.ಆರ್‌.ಗೆ ಪಾಲಕರ ಜನನ ದಾಖಲೆ ಬೇಕಿಲ್ಲ – ಬಿಜೆಪಿ ರಾಜ್ಯ ಸಭಾ ಸದಸ್ಯ ಸ್ವಪನ್‌ ದಾಸಗುಪ್ತಾ

Spread the love

ಎನ್‌.ಪಿ.ಆರ್‌.ಗೆ ಪಾಲಕರ ಜನನ ದಾಖಲೆ ಬೇಕಿಲ್ಲ – ಬಿಜೆಪಿ ರಾಜ್ಯ ಸಭಾ ಸದಸ್ಯ ಸ್ವಪನ್‌ ದಾಸಗುಪ್ತಾ

ಮಂಗಳೂರು: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಗೆ ಪಾಲಕರ ಜನನದ ದಾಖಲೆಗಳನ್ನು ಒದಗಿಸುವ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯ ಸಭಾ ಸದಸ್ಯ ಸ್ವಪನ್‌ ದಾಸಗುಪ್ತಾ ಹೇಳಿದರು.

ಸಿಟಿಜೆನ್ಸ್‌ ಫೋರಂ ವತಿಯಿಂದ ನಗರದ ಹೋಟೆಲ್‌ ಓಷಿಯನ್‌ ಪರ್ಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌)ಯು, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯ ಮೊದಲ ಹಂತ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಎನ್‌ಪಿಆರ್ ಮತ್ತು ಎನ್‌ಆರ್‌ಸಿ ಗೆ ಯಾವುದೇ ಸಂಬಂಧವಿಲ್ಲ. ಬಹುತೇಕ ಜನರು ತಮ್ಮ ಪಾಲಕರ ಜನನದ ದಿನಾಂಕದ ದಾಖಲೆಗಳನ್ನು ಹೊಂದಿಲ್ಲ. ಅಲ್ಲದೇ ಎನ್‌ಪಿಆರ್‌ಗೆ ಈ ದಾಖಲೆಗಳನ್ನು ಕೊಡುವ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

‘ಎನ್‌ಪಿಆರ್‌ನಲ್ಲಿ ನಮ್ಮ ಪಾಲಕರು, ಪೋಷಕರ ಮಾತೃಭಾಷೆಯನ್ನು ನಮೂದಿಸಬೇಕು. ದೇಶದ ಜನಸಂಖ್ಯೆಯನ್ನು ಆಧರಿಸಿ, ಸರ್ಕಾರ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶ ದಿಂದ ಎನ್‌ಪಿಆರ್‌ ನಡೆಸಲಾಗುತ್ತಿದೆ’ ಎಂದರು.

ಎನ್ಆರ್‌ಸಿ ಜಾರಿಗೊಳಿಸಿದಲ್ಲಿ ಮುಸ್ಲಿಮರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂಬ ಹೆದರಿಕೆಯನ್ನು ಆ ಸಮುದಾಯದಲ್ಲಿ ಬಿತ್ತಲಾಗುತ್ತಿದೆ. ಇದು ಪ್ರತಿಪಕ್ಷಗಳು ರೂಪಿಸಿರುವ ಅಪಪ್ರಚಾರ. ಸಿಎಎ ಮತ್ತು ಎನ್‌ಆರ್‌ಸಿ ಜಾರಿಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿದರು.

1998 ರಲ್ಲಿ ಆಸ್ಸಾಂನದಲ್ಲಿ ಶೇ 28.4 ರಷ್ಟಿದ್ದ ಮುಸ್ಲಿಂ ಜನಸಂಖ್ಯೆ, 2011 ರ ವೇಳೆಗೆ ಶೇ 34 ಕ್ಕೆ ಏರಿಕೆಯಾಗಿದೆ. ಅಕ್ರಮ ನುಸುಳುವಿಕೆಯಿಂದ ಆಸ್ಸಾಂನದಲ್ಲಿ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಅಕ್ರಮ ವಲಸಿಗರು ಆಸ್ಸಾಂಗೆ ಬರುತ್ತಿರುವುದು ನಿರಂತರವಾಗಿದೆ. ಹೀಗಾಗಿ ಅಕ್ರಮ ವಲಸಿಗರಿಂದ ದೇಶವನ್ನು ರಕ್ಷಿಸುವುದು ಅವಶ್ಯಕವಾಗಿದೆ. ಅದಕ್ಕಾಗಿಯೇ ಎನ್‌ಆರ್‌ಸಿ ಜಾರಿಗೊಳಿಸುವ ಮೂಲಕ ಅಕ್ರಮ ವಲಸಿಗರನ್ನು ಪತ್ತೆ ಮಾಡಲಾಗುತ್ತದೆಯೇ ಹೊರತು, ದೇಶದ ಜನರನ್ನು ಹೊರಗೆ ಹಾಕುವುದಿಲ್ಲ ಎಂದು ವಿವರಿಸಿದರು.

ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದ ಮುಸ್ಲಿಮರನ್ನು ಏಕೆ ಸಿಎಎ ಅಡಿ ಸೇರ್ಪಡೆ ಮಾಡಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ಥಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಮುಸ್ಲಿಮರು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಈ ದೇಶಗಳಲ್ಲಿ ಇರುವ ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅವರಿಗೆ ದೇಶದ ಪೌರತ್ವ ನೀಡುವುದು ನಮ್ಮ ಕರ್ತವ್ಯವೂ ಆಗಿದೆ’ ಎಂದರು.


Spread the love