ಕತ್ತಿಯಿಂದ ಮಗನನ್ನು ಕಡಿದ ತಂದೆ ಆತ್ಮಹತ್ಯೆ

Spread the love

ಕತ್ತಿಯಿಂದ ಮಗನನ್ನು ಕಡಿದ ತಂದೆ ಆತ್ಮಹತ್ಯೆ

ಕಡಬ  : ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಪಟ್ಟೆಮಜಲು ಎಂಬಲ್ಲಿ ಬುಧವಾರ ಬೆಳಿಗ್ಗೆ, ಪುತ್ರನಿಗೆ ಕತ್ತಿ ಯಿಂದ ಗಂಭೀರ ಹಲ್ಲೆ ನಡೆಸಿದ ತಂದೆ, ಬಳಿಕ ಚಾಕುವಿನಿಂದ ತನ್ನ ಮರ್ಮಾಂಗ ಮತ್ತು ಕುತ್ತಿಗೆಯನ್ನು ತಾನೆ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆಲಂಕಾರು ಗ್ರಾಮದ ಪಟ್ಟೆಮಜಲು ಶೀನಪ್ಪ ಪೂಜಾರಿ ಎಂಬವರ ಪುತ್ರ ರಾಜೀವ ಪೂಜಾರಿ (45), ತನ್ನ
ಪುತ್ರ ರತನ್ (20) ಮೇಲೆ ಹಲ್ಲೆ ಮಾಡಿದ್ದು, ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಾಯಾಳು ಪುತ್ರನ ಕುತ್ತಿಗೆಗೆ ಗಂಭೀರ ಗಾಯವಾಗಿದ್ದು, ಪುತ್ತೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ರಾಜೀವ ಪೂಜಾರಿ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿದೆ. ಆದರೆ ಪ್ರಕರಣದ ಕುರಿತು ತನಿಖೆಯ ನಂತರವಷ್ಟೇ ಸ್ಪಷ್ಟ ಮಾಹಿತಿ ತಿಳಿಯಲಿದೆ ಎಂದು ಕಡಬ ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ರಾಜೀವ ಪೂಜಾರಿ ತನ್ನ ಪತ್ನಿ ಜಯಂತಿ ಮತ್ತು ತನ್ನ ಇಬ್ಬರು ಪುತ್ರರೊಂದಿಗೆ ಕೂಲಿ ಕೆಲಸ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದ. 2016ರಲ್ಲಿ ಕಿರಿಯ ಪುತ್ರ ಕಿರಣ್, ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ಪುತ್ರನ ನೆನೆಪಿನಲ್ಲಿಯೇ ತಂದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗಿದೆ.

ಈ ಮಧ್ಯೆ ಕಳೆದ ವರ್ಷ ರಾಜೀವ ಪೂಜಾರಿ 1 ತಿಂಗಳು ನಾಪತ್ತೆಯಾಗಿದ್ದ. ಎರಡು ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದ.

ಬುಧವಾರ ಎಂದಿನಂತೆ ರಾಜೀವ ಪೂಜಾರಿ ಹುಲ್ಲು ತರಲು ಕತ್ತಿ ಹಿಡಿದುಕೊಂಡು ಹೊರಟಿದ್ದ.ಈ ವೇಳೆ ಏಕಾಏಕಿ ಮಗನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ. ತಂದೆ ಕೈಯಿಂದ ತಪ್ಪಿಸಿಕೊಂಡು ತಾಯಿ ಬಳಿಗೆ ಬಂದಿದ್ದು, ಅಲ್ಲಿಗೂ ಅಟ್ಟಿಸಿಕೊಂಡು ಬಂದಿದ್ದ. ಜಾಗೃತರಾದ ತಾಯಿ, ಮಗನನ್ನು ಎಳೆದುಕೊಂಡು ಅತ್ತೆ– ಮಾವನ ಮನೆಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡರು.

‘ಮನೆಯ ಹಿತ್ತಲಿನ ಹಟ್ಟಿಯ ಬಳಿ ರಾಜೀವ ತನ್ನ ಮರ್ಮಾಂಗ ಮತ್ತು ಕತ್ತನ್ನು ಕೊಯ್ದುಕೊಂಡು ರಕ್ತದ ಮಡುವಿನಲ್ಲಿ ಹೊರಳಾಡುತ್ತಾ ಪ್ರಾಣ ಕಳೆದುಕೊಂಡಿದ್ದಾನೆ’ ಎಂದು ತಾಯಿ ದೇಜಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.


Spread the love