ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಎಫೆಕ್ಟ್– ಮಲ್ಪೆಯಲ್ಲಿ ಏರಿದ ಕಡಲಿನ ಅಬ್ಬರ
ಉಡುಪಿ: ನಿಸರ್ಗ ಚಂಡಮಾರುತದ ಎಫೆಕ್ಟ್ ನಿಂದ ಉಡುಪಿ ಜಿಲ್ಲೆಯಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಜಿಲ್ಲೆಯಲ್ಲಿ ಇಂದು ಸಹ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮಂಗಳೂರಿಗೆ ಆಗಮಿಸಿದೆ.

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಸರ್ಗ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿಗೂ ತಟ್ಟಿದೆ. ಸಮುದ್ರದಲ್ಲಿ ಗಂಟೆಗೆ 70ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ. ಉಡುಪಿ ಸಮೀಪದ ಪಡುಕರೆ, ಮಟ್ಟು, ಗಂಗೊಳ್ಳಿ ಭಾಗಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿದೆ.
ಬುಧವಾರ 110 ಕಿ.ಮೀ. ವೇಗದಲ್ಲಿ ಮುಂಬೈಗೆ ನಿಸರ್ಗ ಚಂಡಮಾರುತ ಬಂದಪ್ಪಳಿಸಲಿದ್ದು ಕರ್ನಾಟಕದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರಕ್ಕೆ ಅಪ್ಪಳಿಸುವ ಚಂಡಮಾರುತದ ಎಫೆಕ್ಟ್ ಕರ್ನಾಟಕದಮೇಲೂ ಉಂಟಾಗಲಿದೆ. ಕಾರವಾರ, ಕುಮಟಾ, ಉಡಪಿ, ಮಂಗಳೂರು ಭಾಗದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್ ಕೊಂಚ ಪ್ರಮಾಣದಲ್ಲಿ ಇರಲಿದೆ. ಇನ್ನು, ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಈ ಮಳೆ ಮುಂದುವರಿಯಲಿದೆ.












