ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ : ಮೋಗ್ಲಿಂಗ್ ಸ್ಮರಣೆ 

Spread the love

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ : ಮೋಗ್ಲಿಂಗ್ ಸ್ಮರಣೆ 

ಮಂಗಳೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಥಿಯೋಲಾಜಿಕಲ್ ಕಾಲೇಜಿನ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆಯನ್ನು ಮಂಗಳೂರಿನ ಥಿಯೋಲಾಜಿಕಲ್ ಕಾಲೇಜ್ ಆವರಣದಲ್ಲಿ ಆಚರಿಸಲಾಯಿತು.

ಕನ್ನಡ ಪತ್ರಿಕೋದ್ಯಮದ ಮೂಲಪುರುಷ “ಮಂಗಳೂರ ಸಮಾಚಾರ “ಪತ್ರಿಕೆಯ ಸಂಸ್ಥಾಪಕ ಸಂಪಾದಕ ಹೆರ್ಮನ್ ಫ್ರೆಡ್ರಿಕ್ ಮ್ಯೋಗ್ಲಿಂಗ್‌ ಅವರ ಪ್ರತಿಮೆ ಕಾಲೇಜಿನ ಆವರಣದಲ್ಲಿದ್ದು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮ್ಯೋಗ್ಲಿಂಗ್ ಅವರಿಗೆ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮೋಗ್ಲಿಂಗ್ ಪ್ರತಿಮೆಗೆ ಮಾಲಾರ್ಪಣೆಗೈದು ಮಾತನಾಡಿ, ” ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 4ನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿದೆ. ಸಮಾಜದ ಒಳಿತು ಕೆಡುಕುಗಳನ್ನು ಎತ್ತಿ ಹಿಡಿದು ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದ್ದು , ಕನ್ನಡದ ಮೊದಲ ಪತ್ರಿಕೆ ಮಂಗಳೂರಿನಲ್ಲಿ ಆರಂಭಗೊಂಡಿರುವುದು ನಮಗೆ ಹೆಮ್ಮೆಯ ವಿಚಾರ, ಈ ಪತ್ರಿಕೆಯನ್ನು ಹುಟ್ಟು ಹಾಕಿದ ಹೆರ್ಮನ್ ಮೋಗ್ಲಿಂಗ್ ಅವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ” ಎಂದು ಹೇಳಿದರು.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಹೆಚ್. ಎಂ. ವಾಟ್ಸನ್‌ರವರು ಮಾತನಾಡಿ, ” ಮೋಗ್ಲಿಂಗ್ ಮತ್ತು ಕಿಟೆಲ್ ಅವರು ಕೇವಲ ಕ್ರೈಸ್ತ ಸಮುದಾಯದ ಆಸ್ತಿಯಲ್ಲ. ಕನ್ನಡಿಗರೆಲ್ಲರ ಆಸ್ತಿ. ಅವರು ನಮ್ಮ ದೇಶದವರಲ್ಲದಿದ್ದರೂ ಕನ್ನಡ ಭಾಷೆಗೆ ಅವರ ಕೊಡುಗೆ ಅಪಾರ. ಅವರ ಸಾಧನೆ ಜನತೆಗೆ ತಿಳಿಯಬೇಕು. ಮಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅವರ ಪ್ರತಿಮೆ ಅಥವಾ ಯಾವುದಾದರೂ ರಸ್ತೆಗೆ ಅವರ ಹೆಸರಿಡಬೇಕು” ಎಂದು ಹೇಳಿದರು.

ಸಭಾಧ್ಯಕ್ಷ ಸ್ಥಾನದಿಂದ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾಧ್ಯಕ್ಷರಾದ ಹರೀಶ್ ಬಂಟ್ವಾಳ್ ಮಾತನಾಡಿ, ” ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನಿರಂತರವಾಗಿ ಮೋಗ್ಲಿಂಗ್ ಪ್ರತಿಮೆ ಇರುವ ಈ ಸ್ಥಳದಲ್ಲಿ ಅವರಿಗೆ ಗೌರವ ಸಲ್ಲಿಸುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿದೆ. ಹಿಂದಿನವರು ಮಾಡಿದ ಒಳ್ಳೆಯ ಕೆಲಸವನ್ನು ಗೌರವಿಸಿ ಸ್ಮರಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ. ಆ ದಿಸೆಯಲ್ಲಿ ಮೋಗ್ಲಿಂಗ್ ಪ್ರತಿಮೆಯನ್ನು ನಗರದ ಒಂದು ಪ್ರಮುಖ ಪ್ರದೇಶದಲ್ಲಿ ಸ್ಥಾಪಿಸುವುದು ಅಥವಾ ಒಂದು ರಸ್ತೆಗೆ ಮೋಗ್ಲಿಗ್ ರವರ ಹೆಸರಿಡುವ ಮಹತ್ವದ ಕಾರ್ಯ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ಆಗಬೇಕು ” ಎಂದರು .

ತುಳು ಅಕಾಡೆಮಿ ಮಾಜಿ ಸದಸ್ಯ ಬೆನೆಟ್ ಅಮನ್ನರವರು ಮಾತನಾಡಿ, ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್‌ರವರು ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಮತ್ತು ಕನ್ನಡ ಪತ್ರಿಕಾರಂಗಕ್ಕೆ ನೀಡಿದ ಕೊಡುಗೆಯ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭ ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಉಪಾಧ್ಯಕ್ಷರು ಲಕ್ಮಣ್ ಕುಂದರ್, ಪ್ರಧಾನ ಕಾರ್ಯದರ್ಶಿ ತಾರಾನಾಥ್ ಗಟ್ಟಿ ಕಾಪಿಕಾಡ್ , ಸಂಘಟನಾ ಕಾರ್ಯದರ್ಶಿಗಳಾದ ಕೆನ್ಯೂಟ್ ಪಿಂಟೋ ಹಾಗೂ ಹಮೀದ್ ವಿಟ್ಲ, ಜತೆ ಕಾರ್ಯದರ್ಶಿ ಈಶ್ವರ್ ವಾರಾಣಾಶಿ, ಕಾರ್ಯಕಾರಿ ಸಮಿತಿ ಸದಸ್ಯ ಹಮೀದ್ ವಿಟ್ಲ, ಸುಳ್ಯ ತಾಲೂಕು ಕೆ.ಜೆ.ಯು. ಅಧ್ಯಕ್ಷ ಉಮೇಶ್ ಮಣಿಕ್ಕರ. ಸೇರಿದಂತೆ ಯೂನಿಯನ್‌ನ ಇತರ ಸದಸ್ಯರು ಮತ್ತು ತಿಯೋಲಾಜಿಕಲ್ ಕಾಲೇಜು ಶಿಕ್ಷಕರು ಉಪಸ್ಥಿತರಿದ್ದರು.


Spread the love