ಕರ್ನಾಟಕ ಬಿಜೆಪಿ ಬಣ ಬಡಿದಾಟಕ್ಕೆ ಹೊಸ ಟ್ವಿಸ್ಟ್: ರಾಜೀನಾಮೆಗೆ ಮುಂದಾದ ಸುನಿಲ್ ಕುಮಾರ್!
ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಬಣ ಬಡಿದಾಟ ಜೋರಾಗಿದ್ದು ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಣಗಳ ನಡುವಿನ ಆರೋಪ ಪ್ರತ್ಯಾರೋಪ ತಾರಕಕ್ಕೇರಿದೆ. ಇದರ ಮಧ್ಯ ಪಕ್ಷದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದ್ದು;, ಈ ಬಗ್ಗೆ ಸ್ವತಃ ಅವರೇ ತಮ್ಮನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಹೈಕಮಾಂಡ್ಗೆ ಮೌಖಿಕವಾಗಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಬೆನ್ನಲ್ಲೇ ಸುನಿಲ್ ಅವರ ಈ ನಡೆ ಅಚ್ಚರಿ ಮೂಡಿಸಿದೆ.
ನಳಿನ್ ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷ ಹುದ್ದೆಯಿಂದ ಇಳಿದ ಬಳಿಕ ಹೈಕಮಾಂಡ್ ವಿಜಯೇಂದ್ರ ಅವರಿಗೆ ಪಟ್ಟ ಕಟ್ಟಿತ್ತು. ಬಳಿಕ ವಿಜಯೇಂದ್ರ ತಮ್ಮದೇ ಒಂದು ತಂಡ ಕಟ್ಟಿದ್ದಾರೆ. ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಯುವ ನಾಯಕರುಗಳಿಗೆ ಆಯಾ ಕಟ್ಟಿನ ಹುದ್ದೆ ನೀಡಿದ್ದಾರೆ. ಅದರಂತೆ ಸುನಿಲ್ ಕುಮಾರ್ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು. ಆದ್ರೆ, ಇದೀಗ ಅದ್ಯಾಕೋ ಸುನಿಲ್ ಕುಮಾರ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಾಹಿಸುತ್ತಿರುವ ಸುನಿಲ್ ಕುಮಾರ್ , ವಿಜಯೇಂದ್ರ ತಂಡದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಜೊತೆ ಸುನಿಲ್ ಕುಮಾರ್ ಯಾವುದೇ ವಿರಸವು ಇಲ್ಲ. ಸಮರಸವು ಇಲ್ಲ. ಆದರೆ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ವಿಜಯೇಂದ್ರ ಜೊತೆ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿಲ್ಲ. ಈಗ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಬೆನ್ನೆಲ್ಲೇ ಸುನಿಲ್ ಕುಮಾರ್, ಹುದ್ದೆಯಿಂದ ಮುಕ್ತಿಗೊಳಿಸುವಂತೆ ಹೈಕಮಾಂಡ್ಗೆ ಈ ಮನವಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಆದ್ರೆ, ಹೈಕಮಾಂಡ್ , ಸುನಿಲ್ ಕುಮಾರ್ ಅವರ ಮನವಿ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.













