ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವ ಪ್ರಯುಕ್ತ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ

ಕಲ್ಮಾಡಿ ಚರ್ಚಿನ ವಾರ್ಷಿಕ ಮಹೋತ್ಸವ ಪ್ರಯುಕ್ತ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ

ಉಡುಪಿ: ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ವೆಲಂಕಣಿ ಮಾತೆಯ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಬ್ಬದ ಪ್ರಯಕ್ತ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ ಅಗಸ್ಟ್ 14ರಂದು ಜರುಗಿತು.

ಆದಿ ಉಡುಪಿ ಜಂಕ್ಷನ್ ಬಳಿ ತೇರಿನ ಮೆರವಣಿಗೆಗೆ ವಿಧಾನಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಐವನ್ ಡಿಸೋಜಾ ಅವರು 31 ವರ್ಷಗಳ ಹಿಂದೆ ಚರ್ಚಿನ ಸ್ಥಾಪನೆಯ ಸಂದರ್ಭದ ಸವಿನೆನಪಿಗಾಗಿ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ ಆಯೋಜಿಸಿಕೊಂಡು ಬಂದಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಭಕ್ತಿ ಎನ್ನುವುದು ಮನಸ್ಸಿನಿಂದ ಬರಬೇಕು ಹೊರತು ಯಾರ ಮೇಲೂ ಹೇರುವಂತದಲ್ಲ. ವೆಲಂಕಣಿ ಮಾತೆ ಪವಾಡ ಮಾತೆ ಎಂದು ಹೆಸರುವಾಸಿಯಾಗಿದ್ದು ಭಕ್ತರು ಭಕ್ತಿಪೂರ್ವಕವಾಗಿ ಮಾಡಿದ ಪ್ರಾರ್ಥನೆಯಿಂದ ಲಭಿಸುವ ಫಲವೇ ಪವಾಡವಾಗಿದೆ ಅಂತಹ ಪ್ರಾರ್ಥನೆಯನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ. ಇಡೀ ರಾಜ್ಯ ಇಂದು ನೆರೆಯ ನೋವಿನಿಂದ ಬಳಲುತ್ತಿದ್ದ ಹಲವಾರು ಮಂದಿ ಜೀವವನ್ನು ಕಳೆದುಕೊಂಡಿದ್ದು ಕೋಟ್ಯಾಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿದೆ. ಸಂತ್ರಸ್ತ ಜನರು ನಮ್ಮ ಪ್ರಾರ್ಥನೆ ಮತ್ತು ನೆರವು ಬಯಸುತ್ತಿದ್ದು ಅವರಿಗೆ ನೆರವಾಗುವ ಅಗತ್ಯತೆ ಇದೆ ಎಂದರು.

ಬಳಿಕ ವೆಲಂಕಣಿ ಮಾತೆಯ ತೇರಿನ ಮೆರವಣಿಗೆ ಆದಿ ಉಡುಪಿ ಜಂಕ್ಷನ್ ಬಳಿಯಿಂದ ಸಾಗಿ ಸ್ಟೆಲ್ಲಾ ಮಾರಿಸ್ ಚರ್ಚಿನ ವರೆಗೆ ಪಾದಯಾತ್ರೆಯ ಮೂಲಕ ತೆರಳಿತು. ಮೆರವಣಿಗೆಯ ಬಳಿಕ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪೌಲ್ ಸಲ್ದಾನ ಅವರು ಪ್ರಾರ್ಥನಾ ವಿಧಿ ಮತ್ತು ಬಲಿಪೂಜೆಯನ್ನು ನೆರವೇರಿಸಿದರು.

ಸ್ಥಳೀಯ ನಗರಸಭಾ ಸದಸ್ಯರಾದ ಸುಂದರ್, ಚರ್ಚಿನ ಪ್ರಧಾನ ಧರ್ಮಗುರು ವಂ|ಆಲ್ಬನ್ ಡಿಸೋಜಾ, ವಾರ್ಷಿಕ ಮಹೋತ್ಸವ ಕಾರ್ಯಕ್ರಮದ ಸಂಚಾಲಕ ವಂ| ಪ್ರವೀಣ್ ಮೊಂತೆರೋ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮೆಂಡೋನ್ಸಾ, ಚರ್ಚಿನ 18 ಆಯೋಗಗಳ ಸಂಚಾಲಕ ಫ್ರಾನ್ಸಿಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಆಗಸ್ಟ್ 15ರಂದು ಸಂಜೆ 4 ಗಂಟೆಗೆ ವಾರ್ಷಿಕ ಹಬ್ಬದ ಸಂಭ್ರಮದ ಬಲಿಪೂಜೆ ಜರುಗಲಿದ್ದು, ಅದರ ನೇತೃತ್ವವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ| ಡಾ. ಜೆರಾಲ್ಡ್ ಐಸಾಕ್ ಲೋಬೊ ವಹಿಸುವರು. ಬೆಳಿಗ್ಗೆ 8 ಗಂಟೆಗೆ ಕೊಂಕಣಿಯಲ್ಲಿ ದಿವ್ಯಬಲಿಪೂಜೆ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಕೊಂಕಣಿಯಲ್ಲಿ, ಸಂಜೆ 6 ಗಂಟೆಗೆ ಕನ್ನಡದಲ್ಲಿ ಹಾಗೂ ರಾತ್ರಿ 8 ಗಂಟೆಗೆ ಇಂಗ್ಲಿಷ್ನಲ್ಲಿ ಬಲಿಪೂಜೆ ನೆರವೇರಲಿದೆ.