ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೌಡಿ ಹಣೆ ಪಟ್ಟಿ ಕಟ್ಟಿದ್ದು ಖಂಡನೀಯ : ಮೀನಾಕ್ಷಿ ಮಾಧವ, ಯುವರಾಜ್

Spread the love

ಕಾಂಗ್ರೆಸ್ ನಗರಸಭಾ ಸದಸ್ಯರಿಗೆ ರೌಡಿ ಹಣೆ ಪಟ್ಟಿ ಕಟ್ಟಿದ್ದು ಖಂಡನೀಯ : ಮೀನಾಕ್ಷಿ ಮಾಧವ, ಯುವರಾಜ್

ಉಡುಪಿ: ಉಡುಪಿ ಜಿಲ್ಲಾ ಬಿ.ಜೆ.ಪಿ ಆಯೋಜಿಸಿದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರು ಕಾಂಗ್ರೆಸ್ ಬೆಂಬಲಿತ ನಗರಸಭಾ ಸದಸ್ಯರಿಗೆ ರೌಡಿಗಳೆಂಬ ಹಣೆ ಪಟ್ಟಿ ಕಟ್ಟಿದ್ದು ಖೇದಕರ ಹಾಗೂ ಖಂಡನೀಯ ಎಂದು ಉಡುಪಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮತ್ತು ನಿಕಟಪೂರ್ವ ನಗರಸಭಾ ಅಧ್ಯಕ್ಷ ಯುವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ನಗರಸಭೆಯ 22 ಕಾಂಗ್ರೆಸ್ ಬೆಂಬಲಿತ ಮತ್ತು ನಾಮನಿರ್ದೇಶಿತ ಒಟ್ಟು 27 ಸದಸ್ಯರ ಯಾರ ಮೇಲೆಯೂ ಈ ವರೆಗೆ ಯಾವುದೇ ಕೇಸಾಗಲಿ ದೂರಾಗಲೀ ಅವರ ಸದಸ್ಯತ್ವದ ಅವಧಿಯಲ್ಲಾಗಲೀ ಅವರ ಸಾರ್ವಜನಿಕ ಬದುಕಿನಲ್ಲಾಗಲಿ ದಾಖಲಾಗಿಲ್ಲ. ಆದರೆ ತಮ್ಮ ಪಕ್ಷದ ಸದಸ್ಯರುಗಳ ಮೇಲೆ ಇರುವ ದೂರು, ಕೇಸುಗಳ ಬಗ್ಗೆ ಮಾಹಿತಿ ಪಡೆದು ಕಾಂಗ್ರೆಸ್ ಪಕ್ಷದ ಸದಸ್ಯರುಗಳ ಕುರಿತು ಮಾತನಾಡುವುದು ಒಳಿತು ಎಂದು ತಿಳಿಸಿದ್ದಾರೆ.

ರೋನಿ ಡಿಮೆಲ್ಲೋ ಅವರು ನಗರಸಭಾ ಅಧಿವೇಶನ ನಡೆಯುತ್ತಾ ಇರುವಾಗ ಏಕಾಏಕಿ ಸದನದೊಳಗೆ ಬಂದದ್ದು ತಪ್ಪು. ನಮ್ಮ ಸದಸ್ಯರು ಉದ್ವೇಗದಿಂದ ಅವರನ್ನು ಸದನದಿಂದ ಹೊರಕ್ಕೆ ಕಳುಹಿಸಿದ್ದು ಹೌದು, ಅವರನ್ನು ತಳ್ಳಾಡಿದ್ದು ಹೌದು ಇಷ್ಟಕ್ಕೆ ಉಡುಪಿ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷರು ರೌಡಿ ಹಣೆಪಟ್ಟಿ ಕಟ್ಟಿದ್ದು ಅವರ ಅಜ್ಞಾನವನ್ನು ಜಗಜ್ಜಾಹೀರು ಪಡಿಸುತ್ತದೆ.

ಈ ಹಿಂದೆ ಬಿ.ಜೆ.ಪಿ ಆಡಳಿತ ಇರುವ ಸಮಯದಲ್ಲಿ ಕೆಲ ಸದಸ್ಯರಿಗೆ ಬಿಜೆಪಿ ಸದಸ್ಯರು ಏಕವಚನದಲ್ಲಿ ನಿಂದಿಸಿ ಅವರು ಸಭೆಗೆ ಬರದಂತೆ ತಡೆ ಒಡ್ಡಿದ್ದು ಉಡುಪಿಯ ಮಹಾಜನತೆಗೆ ತಿಳಿದ ವಿಷಯ ಅಂತಹ ಸದಸ್ಯರನ್ನು ಪಕ್ಕದಲ್ಲಿ ನಿಲ್ಲಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಮಾತನಾಡುವುದು ಶೋಭೆಯಲ್ಲ.

ಉಡುಪಿ ಮಾಜಿ ಶಾಸಕ ರಘುಪತಿ ಭಟ್ ರವರು ಟಿ.ವಿ ಚಾನೆಲ್‍ಗಳಲ್ಲಿ ಬಂದ ವಿಷಯ ಪ್ರಸ್ತಾಪಿಸಿ ಉಡುಪಿ ಜನತೆ ನಾಚಿಕೆ ಪಡುವಂತಾಗಿದೆ ಎಂಬ ಮಾತನ್ನಾಡಿದ್ದಾರೆ. ಆದರೆ ರಘುಪತಿ ಭಟ್ಟರು ಶಾಸಕರಾಗಿದ್ದ ಸಂಧರ್ಭ ನಡೆಸಿದ ‘ರೇವ್ ಪಾರ್ಟಿ’ ಕಾರ್ಯಕ್ರಮ ಹಾಗೂ ಅವರ ‘ಸಿಡಿ ಪ್ರಕರಣ’ ಗಳಿಂದ ಉಡುಪಿ ಜನತೆ ಯಾವ ಪರಿಸ್ಥಿತಿಯನ್ನು ಎದುರಿಸಿದ್ದಾರೆ ಎಂದು ಅವರಿಗೆ ಮರೆತು ಹೋಗಿದೆಯೋ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಉಸ್ತುವಾರಿ ಸಚಿವರನ್ನು ಈ ಘಟನೆಯಲ್ಲಿ ಎಳೆದು ಅವರ ಹೆಸರಿಗೆ ಕಳಂಕ ತರುವ ಪ್ರಯತ್ನದಲ್ಲಿ ಯಶಸ್ಸು ಸಿಗದು ಎಂದು ಪ್ರತಿಕ್ರಿಯಿಸಿದ್ದಾರೆ.


Spread the love