ಕಾಡುಬೆಕ್ಕು, ಮೊಲ ವಶ: ಇಬ್ಬರ ಬಂಧನ
ಚಾಮರಾಜನಗರ: ಕಾಡು ಬೆಕ್ಕು ಹಾಗೂ ಮೊಲವನ್ನು ಬೇಟೆ ಮಾಡಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇಬ್ಬರನ್ನು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಉಪ್ಪುರುಕ ಬಸಪ್ಪ ದೇವಾಲಯದ ಬಳಿ ನಡೆದಿದೆ.

ಬನ್ನಿತಾಳಪುರದ ಮಹದೇವಶೆಟ್ಟಿ ಮತ್ತು ಮಾದಶೆಟ್ಟಿ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಬನ್ನಿತಾಳಪುರದ ಗೋಪಾಲಯ್ಯ, ಕರಿಶೆಟ್ಟಿ, ಮಹೇಶ್ ಎಂಬುವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ 3 ಕಾಡು ಬೆಕ್ಕು 4 ಜೀವಂತ ಮೊಲವನ್ನು ಬೇಟೆ ಮಾಡಿ ಸಾಗಾಟ ಮಾಡಲು ಯತ್ನಿಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ಮಾಡಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಉಪ್ಪುರುಕ ಬಸಪ್ಪ ದೇವಾಲಯ ಬಳಿ ಸಿಕ್ಕಿಬಿದ್ದಿದ್ದಾರೆ. ದಾಳಿಯ ವೇಳೆ 3 ಕಾಡು ಬೆಕ್ಕು 4 ಜೀವಂತ ಮೊಲ ಸಹಿತ ಮಹದೇವಶೆಟ್ಟಿ ಮತ್ತು ಮಾದಶೆಟ್ಟಿ ಸಿಕ್ಕಿಬಿದ್ದರೆ, ಇನ್ನುಳಿದ ಬನ್ನಿತಾಳಪುರದ ಗೋಪಾಲಯ್ಯ,ಕರಿಶೆಟ್ಟಿ, ಮಹೇಶ್ ತಲೆ ಮರೆಸಿಕೊಂಡಿದ್ದಾರೆ.
ಆರೋಪಿಗಳಿಂದ ಬೆಕ್ಕು ಹಾಗೂ ಮೊಲವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.












