ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

Spread the love

ಪ್ರಾಣಿಗಳ ಬೇಟೆಗೆ ಹೊಂಚು ಹಾಕುತ್ತಿದ್ದ ನಾಲ್ವರ ಬಂಧನ

ಚಾಮರಾಜನಗರ: ಜಿಲ್ಲೆಯಲ್ಲಿ ಕಳ್ಳಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಎಷ್ಟೇ ಕಠಿಣ ಕ್ರಮ ಕೈಗೊಂಡರೂ ಬೇಟೆಗಾರರ ಹಾವಳಿ ನಿಂತಂತೆ ಕಾಣುತ್ತಿಲ್ಲ. ಅಕ್ರಮವಾಗಿ ಅರಣ್ಯ ಪ್ರವೇಶಿಸುವ ಬೇಟೆಗಾರರು ವನ್ಯಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ನಡೆಯುತ್ತಲೇ ಇದೆ.

ಇದೀಗ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ ಯಳಂದೂರು ವನ್ಯಜೀವಿ ವಲಯದ ಅರಣ್ಯವನ್ನು ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿಗಳ ಬೇಟೆಯಾಡಲು ಮುಂದಾಗಿದ್ದ ವ್ಯಕ್ತಿಗಳನ್ನು ಅರಣ್ಯ ಇಲಾಖೆ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಕೃಷ್ಣಪುರದ ರಾಜೇಂದ್ರ (ಗೂಳಿ), ಕುಮಾರ್ (ದುಂಬಿ), ಮಹೇಶ್ (ಮುದ್ದ), ಶ್ರೀನಿವಾಸ ಬಂಧಿತರಾಗಿದ್ದು, ಇವರೊಂದಿಗೆ ಇನ್ನಿಬ್ಬರು ಸೇರಿದಂತೆ ಸುಮಾರು ಆರು ಮಂದಿ ಬೇಟೆಯಾಡುವ ಉದ್ದೇಶದಿಂದ ಎರಡು ಬೈಕ್ ಹಾಗೂ ಒಂದು ಸ್ಕೂಟರ್ ನಲ್ಲಿ ಎರಡು ಬಂದೂಕುಗಳೊಂದಿಗೆ ತೆರಳಿದ್ದರು.

ಹುಲಿ ರಕ್ಷಿತಾರಣ್ಯವನ್ನು ಪ್ರವೇಶಿಸಿ ವನ್ಯ ಜೀವಿಗಳನ್ನು ಬೇಟೆಯಾಡಲು ಸಂಚು ರೂಪಿಸುತ್ತಿರುವ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪ್ ಜೆ.ಕಂಟ್ರಾಕ್ಟರ್ ಮಾರ್ಗದರ್ಶನದಲ್ಲಿ ಎಸಿಎಫ್ ಕೆ.ಸುರೇಶ್, ಆರ್‌ಎಫ್ಒ ಎಚ್.ಎನ್.ನಾಗೇಂದ್ರ ನಾಯಕ ಹಾಗೂ ಸಿಬ್ಬಂದಿ ಎಂ.ಪುನೀತ್ ಕುಮಾರ್, ಎಸ್.ಎಂ.ವರುಣಕುಮಾರ್ ದಾಳಿ ನಡೆಸಿದ್ದಾರೆ.

ಈ ಸಂದರ್ಭ ಆರೋಪಿಗಳಾದ ಕೃಷ್ಣಪುರದ ರಾಜೇಂದ್ರ (ಗೂಳಿ), ಕುಮಾರ್ (ದುಂಬಿ), ಮಹೇಶ್ (ಮುದ್ದ), ಶ್ರೀನಿವಾಸ ಅವರು ಸಿಕ್ಕಿಬಿದ್ದಿದ್ದು, ಅವರಿಂದ ಎರಡು ಬೈಕ್, ಒಂದು ಸ್ಕೂಟರ್ ಹಾಗೂ ಎರಡು ನಾಡಬಂದೂಕು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನಹ ನ್ಯಾಯಾಲಯಕ್ಕೆ ಒಪ್ಪಿಸಿದ ಮೇರೆಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇವರೊಂದಿಗಿದ್ದ ಇನ್ನಿಬ್ಬರು ತಪ್ಪಿಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.


Spread the love