ಕಾಪು: ರಸ್ತೆ ಅಪಘಾತಕ್ಕೆ ಸಿನಿಮಾಟೋಗ್ರಾಫರ್ ಡಿ ಜೆ ಮರ್ವಿನ್ ಬಲಿ
ಉಡುಪಿ: ಹೆಸರಾಂತ ಸಿನಿಮಾಟೋಗ್ರಾಫರ್ ಓರ್ವ ರಸ್ತೆ ಅಫಘಾತಕ್ಕೆ ಬಲಿಯಾದ ಘಟನೆ ಕಾಪು ಸಮೀಪದ ಮೂಳೂರು ಎಂಬಲ್ಲಿ ಶನಿವಾರ ಬೆಳಗ್ಗಿನ ಜಾವ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಡಿಜೆ ಮರ್ವಿನ್ (35) ಎಂದು ಗುರುತಿಸಲಾಗಿದೆ.
ಅವರು ಶನಿವಾರ ಬೆಳಗ್ಗಿನ ಜಾವ ತಮ್ಮ ಕಾರಿನಲ್ಲಿ ವಿಡಿಯೋ ಎಡಿಟರ್ ಪ್ರಜ್ವಲ್ ಸುವರ್ಣ, ಪ್ರಸಾದ್ ಮತ್ತು ವಿಘ್ನೇಶ್ ಎಂಬವರ ಜೊತೆ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಕಾಪು ಮೂಳೂರು ಸಮೀಪ ರಸ್ತೆಯಲ್ಲಿ ಬೀದಿ ನಾಯಿಯನ್ನು ತಪ್ಪಿಸಲು ಹೋದ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.
ಈ ವೇಳೆ ಸ್ಥಳೀಯ ಅಂಬುಲೆನ್ಸ್ ಚಾಲಕರಾದ ಜಲಾಲುದ್ದೀನ್, ಹಮೀದ್ ಉಚ್ಚಿಲ, ಕೆ ಎಮ್ ಸಿರಾಜ್ ಅನ್ವರ್ ಮತ್ತು ಸ್ಥಳೀಯ ಪೊಲೀಸರು ಎಲ್ಲಾ ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ಮರ್ವಿನ್ ಅವರು ದಾರಿ ಮಧ್ಯ ಮೃತಪಟ್ಟಿದ್ದಾರೆ. ಉಳಿದ ಪ್ರಜ್ವಲ್ ಸುವರ್ಣ, ಪ್ರಸಾದ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮರ್ವಿನ್ ಅವರು ಡಿಜೆ ವೃತ್ತಿಯನ್ನು ಮಾಡಿಕೊಂಡಿದ್ದು ಅದರೊಂದಗಿಗೆ ಕೊಂಕಣಿ, ತುಳು ಚಿತ್ರಗಳಿಗೆ ಸಿನಿಮಾಟೋಗ್ರಾಫಿ ಕೂಡ ಮಾಡಿದ್ದರು.