ಕಾಸರಗೋಡು ಹೋರಾಟದ ಹಿರಿಯ ಕೊಂಡಿ ಬಳ್ಳುಳ್ಳಾಯರು – ಪೆರ್ಲ

Spread the love

ಕಾಸರಗೋಡು ಹೋರಾಟದ ಹಿರಿಯ ಕೊಂಡಿ ಬಳ್ಳುಳ್ಳಾಯರು – ಪೆರ್ಲ

ಕಾಸರಗೋಡು ಕನ್ನಡ ಹೋರಾಟದ ಹಿರಿಯ ಕೊಂಡಿ ಮತ್ತು ಹಿರಿಯ ಪತ್ರಕರ್ತರಾದ
ಎಂ.ವಿ.ಬಳ್ಳುಳ್ಳಾಯರ ಅಗಲುವಿಕೆ ಕಾಸರಗೋಡಿನ ಕನ್ನಡಿಗರಿಗೆ ತುಂಬಲಾರದ ನಷ್ಟ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಅಭಿಪ್ರಾಯ ಪಟ್ಟಿದ್ದಾರೆ.

ಭಾಷಾವಾರು ಪ್ರಾಂತ್ಯ ವಿಭಜನೆಯ ಸಂದರ್ಭದಲ್ಲಿ ಕಳ್ಳಿಗೆ ಮಹಾಬಲ ಭಂಡಾರಿ, ಕ್ಯಾಪ್ಟನ್ ಶೆಟ್ಟಿ, ಯು.ವಿ.ಕುಣಿಕುಳ್ಳಾಯ, ಬೇವಿಂಜೆ ಕಕ್ಕಿಲ್ಲಾಯರು, ಕಯ್ಯಾರ ಕಿಂಞಣ್ಣ ರೈ ಮುಂತಾದವರ ಜೊತೆ ಮುಂಚೂಣಿಯಲ್ಲಿ ನಿಂತು ವಿಲೀನೀಕರಣಕ್ಕಾಗಿ ದನಿ ಮೊಳಗಿಸಿದವರು. ಭಾಷಾ ಅಲ್ಪ ಸಂಖ್ಯಾತ ಪ್ರದೇಶವಾದ ಕಾಸರಗೋಡು ಕನ್ನಡಿಗರಲ್ಲಿ ಕನ್ನಡಾಭಿಮಾನ ಜಾಗೃತಿಗಾಗಿ ‘ನಾಡಪ್ರೇಮಿ’ ಪತ್ರಿಕೆ ಪ್ರಾರಂಭಿಸಿ ಕನ್ನಡ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರು. ಬದುಕಿನ ಕೊನೆಗಾಲದವರೆಗೂ ಕಾಸರಗೋಡು ಕನ್ನಡಿಗರ ಹಕ್ಕಿಗಾಗಿ ಸತತ ಹೋರಾಟ ಮಾಡಿದವರು. ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರನಾಗಿ ಸುದೀರ್ಘ ಸೇವೆ ಸಲ್ಲಿಸಿ ಮಾದರಿ ಪತ್ರಕರ್ತನಾಗಿ ಹೆಸರು ಪಡೆದವರು. ಯುವ ಪತ್ರಕರ್ತರನ್ನು ಪ್ರೋತ್ಸಾಹಸಿದ್ದಲ್ಲದೆ, ಕನ್ನಡ ಪತ್ರಿಕೆಗಳಾದ ಗಡಿನಾಡು, ಪ್ರತಿಸೂರ್ಯ, ಬಯ್ಯಮಲ್ಲಿಗೆ, ಕಾಸರಗೋಡು ಸಮಾಚಾರ ಮುಂತಾದ ಪತ್ರಿಕೆಗಳಿಗೆ ಬೆಂಬಲ ನೀಡಿ ಪತ್ರಿಕಾರಂಗದ ಬೆಳವಣಿಗೆಗೆ ಕಾರಣೀ ಭೂತರಾದವರು. ಕಾಸರಗೋಡಿನಲ್ಲಿ 90 ರ ದಶಕದಲ್ಲಿ ಪ್ರತಿಸೂರ್ಯ ಪತ್ರಿಕೆಯ ಆರಂಭ ಕಾಲದಲ್ಲಿ ನಮ್ಮಂತಹ ಅನೇಕ ವರದಿಗಾರರನ್ನು ನೇಮಕ ಮಾಡಿರುವುದರಿಂದ ಮಾಧ್ಯಮರಂಗದಲ್ಲಿ ಬೆಳೆಯಲು ಕಾರಣೀ ಭೂತರಾದವರು.

ಪ್ರಖರ ಬರಹಗಳ ಮೂಲಕ ಮನೆ ಮಾತಾದ ಬಳ್ಳುಳ್ಳಾಯರು ‘ಪುನರ್ಜನ್ಮ’ ಆತ್ಮಕಥನ ಬರೆದಿದ್ದಾರೆ. ನಾಡು-ನುಡಿಯ ಲೇಖನಗಳು ಇಂದಿಗೂ ಸ್ಮರಣಿಯವಾಗಿದೆ. ಕಾಸರಗೋಡಿನ ಕುರಿತಾದ ನನ್ನ ಸಂಶೋಧನಾ ಪ್ರಬಂಧ ‘ಕಾಸರಗೋಡಿನ ಕನ್ನಡ ಹೋರಾಟ’ ಕೃತಿ ಕಾಸರಗೋಡಿನ ಎಲ್ಲ ಕನ್ನಡಿಗರಿಗೂ ಸಿಗುವಂತಾಗಬೇಕೆಂದು ಪುಸ್ತಕ ಪ್ರಾಧಿಕಾರಕ್ಕೆ ಒತ್ತಾಯಿಸಿದ್ದರು. ಕಾಸರಗೋಡಿನ ಬಗ್ಗೆ ತೀವ್ರ ಕಾಳಜಿ ವಹಿಸಿ ಮಾರ್ಗದರ್ಶನ ನೀಡುತ್ತಿದ್ದ ಬಳ್ಳುಳ್ಳಾಯರ ಅಗಲುವಿಕೆ ಕಾಸರಗೋಡಿನ ಕನ್ನಡಿಗರಿಗೆ ತುಂಬಲಾರದ ನಷ್ಟವಾಗಿದೆ.


Spread the love