‘ಕಿರಿಕ್ ಪಾರ್ಟಿ’ ಜೋಡಿ ನಟ ರಕ್ಷಿತ್‌ ಶೆಟ್ಟಿ -ರಶ್ಮಿಕಾ ಅದ್ಧೂರಿ ನಿಶ್ಚಿತಾರ್ಥ

Spread the love

‘ಕಿರಿಕ್ ಪಾರ್ಟಿ’ ಜೋಡಿ ನಟ ರಕ್ಷಿತ್‌ ಶೆಟ್ಟಿ -ರಶ್ಮಿಕಾ ಅದ್ಧೂರಿ ನಿಶ್ಚಿತಾರ್ಥ

ಮಡಿಕೇರಿ(ಪ್ರಜಾವಾಣಿ ವಾರ್ತೆ): ಚಿತ್ರನಟ ರಕ್ಷಿತ್‌ ಶೆಟ್ಟಿ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥವು ಕೊಡಗು ಜಿಲ್ಲೆಯ ವಿರಾಜಪೇಟೆಯ ಸೆರೆನಿಟಿ ಹಾಲ್‌ನಲ್ಲಿ ಸೋಮವಾರ ಅದ್ಧೂರಿಯಾಗಿ ನಡೆಯಿತು.

ದುಬೈನಿಂದ ಬೆಳಿಗ್ಗೆ ಆಗಮಿಸಿದ ಜೋಡಿ, ಕುಟುಂಬ ಸದಸ್ಯರೊಂದಿಗೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತು. ಹೊರಗೆ ಸಂಜೆ ತುಂತುರು ಮಳೆ ಸುರಿಯುತ್ತಿದ್ದರೆ, ಅತ್ತ ರಶ್ಮಿಕಾ ಅವರ ತಂದೆ ಎಂ.ಮದನ್‌ ಮಂದಣ್ಣ ಒಡೆತನದ ಸೆರೆನಿಟಿ ಹಾಲ್‌ನಲ್ಲಿ ಝಗಮಗಿಸುತ್ತಿದ್ದ ವೇದಿಕೆಯಲ್ಲಿ ಕರಾವಳಿ-– ಕೊಡವ ಸಂಪ್ರದಾಯದಂತೆ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿತು. ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಇಬ್ಬರು ವಜ್ರದ ಉಂಗುರ ಬದಲಿಸಿಕೊಂಡರು.

ರಕ್ಷಿತ್‌ ತಾನೇ ವಿನ್ಯಾಸಗೊಳಿಸಿದ್ದ ಸೂಟ್‌ ಧರಿಸಿದ್ದರೆ, ರಶ್ಮಿಕಾ ಮಾತ್ರ ಶ್ರದ್ಧಾ ಪೊನ್ನಪ್ಪ ಅವರು ವಿನ್ಯಾಸಗೊಳಿಸಿದ ಗೌನ್‌ನಲ್ಲಿ ಮಿಂಚುತ್ತಿದ್ದರು.

‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ಕರ್ಣ ಹಾಗೂ ಸಾನ್ವಿ ಪಾತ್ರದಲ್ಲಿ ಈ ಜೋಡಿ ಪ್ರೇಕ್ಷಕರ ಮನಗೆದ್ದಿತ್ತು.

ಚಿತ್ರಾ ಅಯ್ಯಪ್ಪ ತಂಡವು ಪ್ರಧಾನ ವೇದಿಕೆಯ ಅಲಂಕಾರದ ಹೊಣೆ ಹೊತ್ತುಕೊಂಡಿತ್ತು. ವೇದಿಕೆಯು ಹೂವು, ಬಿಳಿ, ಹಸಿರು ಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿತ್ತು. ನಿರ್ದೇಶಕ ಯೋಗರಾಜ್‌ ಭಟ್‌, ನಟ ರಿಶಬ್‌ ಶೆಟ್ಟಿ, ನಟಿ ಸಂಯುಕ್ತ ಹೆಗಡೆ ಸೇರಿದಂತೆ ಚಿತ್ರರಂಗದ ಹಲವರು ನಿಶ್ಚಿತಾರ್ಥಕ್ಕೆ ಸಾಕ್ಷಿಯಾದವರು.

ಭರ್ಜರಿ ಔತಣಕೂಟ: ರಾತ್ರಿ ನಡೆದ ಔತಣಕೂಟಕ್ಕೆ ಬಗೆಬಗೆಯ ಖಾದ್ಯಗಳನ್ನು ಮಾಡಲಾಗಿತ್ತು. ಕೊಡವ ಶೈಲಿಯ ಕಡುಂಬಿಟ್ಟು, ನುಪ್ಪಿಟ್ಟು, ಪಂದಿಕರಿ, ಪೋರ್ಕ್‌ ಡ್ರೈ, ಪೋರ್ಕ್‌ ಚಾಪ್ಸ್‌, ನಾಟಿ ಚಿಕನ್‌ ಡ್ರೈ, ಮಟನ್‌ ಬಿರಿಯಾನಿ, ಚಿಕನ್‌ ಪೆಪ್ಪರ್‌ ಡ್ರೈ ಹಾಗೂ ಚೈನೀಸ್‌ ವೆಜ್‌ ಫ್ರೈಡ್‌ರೈಸ್‌, ಚಿಕನ್‌ ಫ್ರೈಡ್‌ ರೈಸ್‌, ವೆಜ್‌ ನೂಡಲ್ಸ್‌, ಚಿಕನ್‌ ನೂಡಲ್ಸ್‌ ಸೇರಿದಂತೆ ಉತ್ತರ ಭಾರತ, ಕರಾವಳಿ ಶೈಲಿಯ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ರಾಮದಾಸ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಬಾಣಸಿಗರು ಅಡುಗೆ ಸಿದ್ಧಪಡಿಸಿದ್ದರು.

ತುಂತುರು ಮಳೆ ಹಾಗೂ ಬೆಂಗಳೂರಿನ ವಿವೇಕ್‌ ಸೋಮಯ್ಯ ತಂಡವು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮದ ನಡುವೆ ಗಣ್ಯರು ಔತಣಕೂಟ ಸವಿದರು.

ಆಮಂತ್ರಣ ಪತ್ರಿಕೆಯೊಂದಿಗೆ ಬಂದವರಿಗೆ ಮಾತ್ರ ವೇದಿಕೆಯತ್ತ ಬಿಡಲಾಯಿತು. ಸಂಜೆಯ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳಿಗೂ ಪ್ರವೇಶ ನಿರಾಕರಿಸಲಾಗಿತ್ತು.


Spread the love