ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ- ವಿನಯ ಕುಮಾರ್ ಸೊರಕೆ

Spread the love

ಕೆರೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ- ವಿನಯ ಕುಮಾರ್ ಸೊರಕೆ

ಉಡುಪಿ: ಉಡುಪಿ ತಾಲೂಕಿನಲ್ಲಿ ಕೆರೆಗಳ ನಿರ್ಮಾಣ ಮತ್ತು ಅಭಿವೃದ್ದಿಗೆ ಅಧಿಕಾರಿಗಳು ಹೆಚ್ಚಿನ ಆದ್ಯತೆ ನೀಡುವಂತೆ ಉಡುಪಿ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷರು ಹಾಗೂ ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.

ಅವರು ಸೋಮವಾರ ಉಡುಪಿ ತಾ.ಪಂ. ಸಭಾಂಗಣದಲ್ಲಿ ನಡೆದ ಉಡುಪಿ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಶ್ಚಿಮ ವಾಹಿನಿಯ ಅನುಷ್ಠಾನಕ್ಕಾಗಿ ಬಜೆಟ್ ನಲ್ಲಿ 100 ಕೋಟಿ ರೂ ಮೀಸಲಿಡಲಾಗಿದೆ, ತಾಲೂಕಿನಲ್ಲಿ ಈಗಾಗಲೇ ಸುಮಾರು 20 ಕರೆಗಳ ಅಬಿವೃದ್ದಿ ಕಾರ್ಯ ನಡೆಯುತ್ತಿದ್ದು, ಕೆರೆ ಅಭಿವೃದ್ದಿ ಪೂರ್ಣಗೊಂಡಿರುವ ಕಡೆಗಳಲ್ಲಿ ನೀರಿನ ಮಟ್ಟ ಜಾಸ್ತಿ ಆಗಿದೆ, ತಾಲೂಕಿನಲ್ಲಿ ಅಗತ್ಯವಿರುವಡೆಗಳಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲು ಸಣ್ಣ ನೀರಾವರಿ ಮತ್ತು ಸಂಬಂದಪಟ್ಟ ಇಲಾಖೆಗಳು ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಶಾಸಕರು ಸೂಚಿಸಿದರು.
ತಾಲೂಕಿನಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ನಡೆಯುತ್ತಿದ್ದು, ಯಾಂತ್ರೀಕೃತ ನಾಟಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ, ಬೆಳೆ ವಿಮೆ ಯೋಜನೆಗೆ ಜುಲೈ 31 ಕೊನೆಯ ದಿನಾಂಕವಾಗಿದೆ ಹಾಗೂ ಜಿಲ್ಲೆಗೆ ಈ ವರ್ಷದಿಂದ ಕೃಷಿ ಭಾಗ್ಯ ಯೋಜನೆ ಮಂಜೂರಾಗಿದ್ದು, ಕೃಷಿ ಹೊಂಡ ರಚನೆಗೆ ಸಹಾಯಧನ ಲಭ್ಯವಿದ್ದು ರೈತರು ಈ ಯೋಜನೆಯ ಪ್ರಯೋಜನ ಪಡೆಯುವಂತೆ ಹಾಗೂ ಮಣ್ಣು ಆರೋಗ್ಯ ಕಾಡ್ ್ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ತಾಲೂಕಿನಲ್ಲಿ ಕೃಷಿ ಚಟುವಟಿಕೆ ಅಭಿವೃದ್ದಿಗೆ ಉತ್ತಮ ಕಾರ್ಯಗಳನ್ನು ಕೈಗೊಂಡಿದ್ದು, ಕಾಪು ಕ್ಷೇತ್ರದಲ್ಲಿ ಹಡಿಲು ಬಿಟ್ಟಿದ್ದ ಸುಮಾರು 250 ಎಕ್ರೆ ಜಾಗದಲ್ಲಿ ಮತ್ತೆ ಕೃಷಿ ಚಟುವಟಿಕೆ ಕೈಗೊಳ್ಳಲಾಗಿದೆ , ಸಾಲ ಮನ್ನಾ ಯೋಜನೆಯಡಿ ಪ್ರಯೋಜನ ಪಡೆಯುವ ಫಲಾನುಭವಿ ರೈತರ ಮಾಹಿತಿಯನ್ನು ಒದಗಿಸುವಂತೆ ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ತಾಲೂಕಿನ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಕಡೆ ಶೀಘ್ರದಲ್ಲಿ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ಹಾಗೂ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವಂತೆ ಸೊರಕೆ ಸೂಚಿಸಿದರು.
ಕೆಲವು ಹಾಸ್ಟಲ್ ಗಳು ಮಳೆಯಿಂದಾಗಿ ಸೋರುತ್ತಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ, ಕೂಡಲೆ ಅಂತಹ ಹಾಸ್ಟಲ್ ಗಳನ್ನು ದುರಸ್ತಿಗೊಳಿಸುವಂತೆ ಹಾಗೂ ಹಾಸ್ಟಲ್ ಗಳ ಪರಿಶೀಲನೆಗೆ ನೇಮಕ ಮಾಡಿದ್ದ ನೋಡಲ್ ಅಧಿಕಾರಿಗಳ ವಿವರ ಹಾಗೂ ಅವರು ಹಾಸ್ಟೆಲ್ ಗಳಿಗೆ ಭೇಟಿ ನೀಡಿದ ಪರಿಶೀಲನೆಯ ವರದಿಯನ್ನು ನೀಡುವಂತೆ ಸೊರಕೆ ತಿಳಿಸಿದರು.
ಮಲೇರಿಯಾ ಹಾಗೂ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಹಾಗೂ ಜನಸಂಖ್ಯೆಗನುಗುಣವಾಗಿ ಮೇಲ್ದರ್ಜೆಗೆ ಏರಿಸಬೇಕಾದ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ಪ್ರಸ್ತಾವನೆಯೊಂದಿಗೆ ಸಲ್ಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕಾಪುನಲ್ಲಿ 5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಪ್ರವಾಸಿ ಮಂದಿರ ನಿರ್ಮಾಣ ಮಾಡುವ ಕುರಿತಂತೆ ಪ್ರಸ್ತಾವನೆ ಸಿದ್ದಪಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಕಾಪು ಕ್ಷೇತ್ರದಲ್ಲಿ ಘನತ್ಯಾಜ್ಯ ವಿಲೇವಾರಿ 10 ಎಕ್ರೆ ಜಾಗ ಗುರುತಿಸಲಾಗಿದ್ದು, ಕಾಪು ಸಮೀಪದ ಗ್ರಾಮ ಪಂಚಾಯತ್ ಗಳು ಸಹ ತ್ಯಾಜ್ಯವನ್ನು ನೀಡುವಂತೆ ಶಾಸಕರು ತಿಳಿಸಿದರು.
ಸಭೆಯಲ್ಲಿ ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ತಹಸೀಲ್ದಾರ್ ಮಹೇಶ್ಚಂದ್ರ, ಬ್ರಹ್ಮಾವರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ ಉಪಸ್ಥಿತರಿದ್ದರು.


Spread the love