ಕುಂದಾಪುರ : ತುಂಬಿ ಹರಿಯುತ್ತಿದೆ ಸೌಪರ್ಣಿಕಾ: ನದಿತೀರದ ನಿವಾಸಿಗಳಿಗೆ ಆತಂಕ

Spread the love

ಕುಂದಾಪುರ : ತುಂಬಿ ಹರಿಯುತ್ತಿದೆ ಸೌಪರ್ಣಿಕಾ: ನದಿತೀರದ ನಿವಾಸಿಗಳಿಗೆ ಆತಂಕ

ಕುಂದಾಪುರ: ಕಳೆದ 3-4 ದಿನಗಳಿಂದ ಸುರಿಯುತ್ತಿರುವ ವರುಣದ ವರ್ಷಧಾರೆ ಭಾನುವಾರ ರಾತ್ರಿಯಿಂದ ತೀವ್ರತೆ ಪಡೆದುಕೊಂಡಿದ್ದು, ಕುಂದಾಪುರದಲ್ಲಿ ಭಾರೀ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆರಾಯ ತನ್ನ ರೌದ್ರಾವತಾರವನ್ನು ಮುಂದುರೆಸಿದ್ದಾನೆ.

ಬಿಡದೆ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯೂ ಸೇರಿಕೊಂಡಿರುವುದು ಜನರ ಆತಂಕಗಳನ್ನು ಹೆಚ್ಚಿಸುತ್ತಿದೆ. ತಾಲ್ಲೂಕಿನಲ್ಲಿ ಹರಿಯುತ್ತಿರುವ ನದಿಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗಾಳಿಯ ಒತ್ತಡವೂ ಹೆಚ್ಚಾಗುತ್ತಿರುವುದರಿಂದ ನದಿ ತೀರ ಪ್ರದೇಶದ ಜನರಲ್ಲಿ ನೆರೆಯ ಆತಂಕ ಹೆಚ್ಚಾಗುತ್ತಿದೆ.

ಎರಡು ದಿನಗಳಿಂದ ವಿಶ್ರಾಂತಿ ಇಲ್ಲದೆ ಸುರಿಯುತ್ತಿರುವ ಮಳೆಯಿಂದಾಗಿ ನದಿ ತೀರ ಪ್ರದೇಶಕ್ಕೆ ಹೊಂದಿಕೊಂಡಿರುವ ತಗ್ಗು ಪ್ರದೇಶಗಳಲ್ಲಿ, ಭತ್ತದ ಗದ್ದೆಗಳಲ್ಲಿ ಹಾಗೂ ಕೃಷಿ ತೋಟಗಳಲ್ಲಿ ನೀರು ನುಗ್ಗಿ ಅವಾಂತರಗಳನ್ನು ಸೃಷ್ಟಿಸುತ್ತಿದೆ. ರಸ್ತೆಯ ಮೇಲೆ ನೀರುಗಳು ನಿಂತು ವಾಹನ ಸವಾರರಿಗೆಹಾಗೂ ಪಾದಚಾರಿಗಳಿಗೆ ತೊಡಕ್ಕುಂಟು ಮಾಡುತ್ತಿದೆ.

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಹಡವು, ಪಡುಕೋಣೆ ಮುಂತಾದ ಊರುಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿವೆ. ಮನೆಗಳು, ಕೃಷಿ ಗದ್ದೆ, ತೆಂಗಿನ ತೋಟಗಳಲ್ಲಿ ಆಳೆತ್ತರದ ನೀರು ನಿಂತಿದ್ದು, ದೋಣಿಗಳ ಮೂಲಕ ನಿವಾಸಿಗಳನ್ನು ಸುರಕ್ಷಿತವಾದ ಸ್ಥಳಕ್ಕೆ ಕರೆತರಲಾಗಿದೆ. ನಾವುಂದ ಬಡಾಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತಗೊಂಡಿದ್ದು, ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಲಾಗಿದೆ. ಹಡವು ಗ್ರಾಮ ಸಂಪೂರ್ಣ ಜಲಾವೃತವಾಗಿದ್ದು, ಸ್ಥಳೀಯರು ಸಂಪರ್ಕ ಕಳೆದುಕೊಂಡಿದ್ದಾರೆ. ಮಾರಸ್ವಾಮಿ-ನಾಡ ರಸ್ತೆಯೂ ನೀರಿನಿಂದ ಆವೃತವಾದ ಪರಿಣಾಮ ಸಂಚಾರ ಸಂಪರ್ಕ ಕಳೆದುಕೊಂಡಿದ್ದು, ಬದಲಿ ಮಾರ್ಗದಲ್ಲಿ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬಡಾಕೆರೆಯಲ್ಲಿ ಮನೆ ಅಂಗಳ ಮುಚ್ಚಿ ನೀರು ಮನೆಗೆ ನುಗ್ಗಿದ್ದರೆ, ಚಿಕ್ಕಳ್ಳಿಯಲ್ಲಿ ಸಂಚಾರಕ್ಕೆ ದೋಣಿ ಬಳಸಿಕೊಳ್ಳಲಾಗಿತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಹೆಚ್ಚಿನ ತಗ್ಗು ಪ್ರದೇಶ ಸಂಪೂರ್ಣ ಜಲಾವೃತ್ತಗೊಂಡಿದ್ದು, ವಿಶಾಲ ಬಯಲು ಪ್ರದೇಶದಲ್ಲಿ ಕಣ್ಣು ಹಾಯಿಸದಷ್ಟು ದೂರ ನೀರು ಬಿಟ್ಟರೆ ಮತ್ತೇನು ಕಾಣಿಸುವುದಿಲ್ಲ. ಭತ್ತದ ಕೃಷಿಯೂ ಕೂಡಾ ಸಂಪೂರ್ಣ ಜಲಾವೃತವಾಗಿದೆ.

ಕೋಡಿ ಪರಿಸರದಲ್ಲಿ ಕಡಲಬ್ಬರ ಜಾಸ್ತಿಯಾದ ಪರಿಣಾಮ ಕಡಲ್ಕೊರೆತ ತೀವ್ರಗೊಂಡಿದೆ. ಸಮುದ್ರ ತಡೆಗೆ ಹಾಕಲಾಗಿದ್ದ ಕಲ್ಲುಗಳು ನೀರು ಪಾಲಾಗಿ, ರಸ್ತೆ ಕೂಡಾ ಅಪಾಯದ ಸ್ಥಿತಿಯಲ್ಲಿದೆ. ಸೌಪರ್ಣಿಕಾ ನದಿ ತೀರದ ಸಾಲ್ಬುಡ, ನಾವುಂದ ಕೆಳಬದಿ, ಬಡಾಕೆರೆ, ಅರೆಹೊಳೆ, ಚಿಕ್ಕಳ್ಳಿ, ಕಡಿಕೆ ನಾಡ, ಸೇನಾಪುರ, ಪಡುಕೋಣೆ, ಕನ್ನಡಕುದ್ರು, ಯಳೂರು, ತೊಪ್ಲು, ಬಟ್ಟೆಕುದ್ರು ಪ್ರದೇಶದಲ್ಲಿ ಕೃಷಿ ಭೂಮಿಗೆ ನೆರೆ ನೀರು ನುಗ್ಗಿದ್ದು, ಚಿಕ್ಕಳ್ಳಿಯಲ್ಲಿ ಮನೆ ಅಂಗಳಕ್ಕೆ ನೀರು ಬಂದಿದೆ.


Spread the love