ಕುಂದಾಪುರ: ದಲಿತ ಕಾಲನಿ ರಸ್ತೆ ಕಳಪೆ ಕಾಮಗಾರಿ ಆರೋಪ: ಜಿಲ್ಲಾಧಿಕಾರಿಗೆ ದೂರು

Spread the love

ಕುಂದಾಪುರ: ದಲಿತ ಕಾಲನಿ ರಸ್ತೆ ಕಳಪೆ ಕಾಮಗಾರಿ ಆರೋಪ: ಜಿಲ್ಲಾಧಿಕಾರಿಗೆ ದೂರು

ಕುಂದಾಪುರ: ಇಲ್ಲಿನ ತಲ್ಲೂರು ಗ್ರಾ.ಪಂ. ವ್ಯಾಪ್ತಿಯ ಕೋಟೆಬಾಗಿಲು ಎಂಬಲ್ಲಿ ನಿರ್ಮಾಣವಾಗುತ್ತಿರುವ 25 ಲಕ್ಷ ರೂ.ಗಳ ಕಾಮಗಾರಿ ಕಳಪೆಯಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.

ಕೋಟೆಬಾಗಿಲಿನಲ್ಲಿ ಸುಮಾರು 208 ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳಿವೆ. ಈ ಕಾಲನಿ ರಸ್ತೆಗೆ ವಾರಾಹಿ ನೀರಾವರಿ ಇಲಾಖೆ ಸಿದ್ದಾಪುರದಿಂದ 25 ಲಕ್ಷ ರೂ. ಅನುದಾನ ಮಂಜೂರಾಗಿದ್ದು ಕೆಆರ್ಡಿಎಲ್ ನಿಗಮ ಕಾಮಗಾರಿ ನಿರ್ವಹಣೆಗೆ ಖಾಸಗಿಯವರಿಗೆ ನೀಡಿದೆ. ಈ ರಸ್ತೆ ಮೂಲಕ ಬಸ್ಸು, ಲಾರಿ ಸೇರಿದಂತೆ ಘನ ವಾಹನಗಳು ಕೂಡಾ ಓಡಾಡುತ್ತವೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು 4 ಮೀ.ನಿಂದ 5 ಮೀ.ವರೆಗೆ ಅಗಲ ಮಾಡಬೇಕಿದ್ದು ಬದಲಾಗಿ ಈಗಾಗಲೇ ಇದ್ದ 3.66 ಮೀ. ಅಗಲದ ರಸ್ತೆಯನ್ನೇ ಅಗೆದು ಜಲ್ಲಿಕಲ್ಲುಗಳನ್ನು ಗುಡ್ಡೆ ಹಾಕಿ ಸಮತಟ್ಟುಗೊಳಿಸದೇ ನಿರ್ಮಿಸಲಾಗಿದೆ. ಕಾಮಗಾರಿ ಸಂದರ್ಭ ಗ್ರಾಮಸ್ಥರಿಗೆ ಓಡಾಡಲು ಪ್ರತ್ಯೇಕ ರಸ್ತೆ ನೀಡಿಲ್ಲ. ಸಮರ್ಪಕ ಚರಂಡಿ ನಿರ್ಮಿಸದೇ ಸಿಮೆಂಟ್ ಪೈಪ್ ಬಳಸಲಾಗಿದ್ದು ಘನವಾಹನಗಳು ಚಲಿಸಿದರೆ ಪೈಪ್ ಒಡೆಯುವ ಸಂಭವವಿದೆ. ಅಂದಾಜುಪಟ್ಟಿ ನಿರ್ಮಾಣ ಸಂದರ್ಭ ತಲ್ಲೂರು ಪಂಚಾಯತ್ ಜತೆ ಸಮಾಲೋಚಿಸಿಲ್ಲ ಎಂದು ಆರೋಪಿಸಲಾಗಿದೆ.

25 ಲಕ್ಷ ರೂ.ಗಳಲ್ಲಿ 400 ಮೀ. ಉದ್ದ, 3.66 ಮೀ. ಅಗಲದ ರಸ್ತೆ ಮಾಡುತ್ತಿದ್ದು ಗುಣಮಟ್ಟದ ಕುರಿತು ತನಿಖೆಯ ಅಗತ್ಯವಿದೆ. ತತ್ಕ್ಷಣ ಕಾಮಗಾರಿಯನ್ನು ನಿಲ್ಲಿಸಿ ಪಂಚಾಯತ್ ಹಾಗೂ ಕೆಆರ್ಡಿಎಲ್ನವರು ಜಂಟಿ ಸರ್ವೆ ಮಾಡಿ ಅಂದಾಜುಪಟ್ಟಿ ತಯಾರಿಸಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಅಲ್ಲಲ್ಲಿ ಮಳೆ ನೀರು ಹರಿಯಲು ವ್ಯವಸ್ಥೆ ಮಾಡಬೇಕು. ಮೋರಿಗಳನ್ನು ಅಳವಡಿಸಬೇಕು. ಕಳಪೆ ಗುಣಮಟ್ಟದ ಕಾಮಗಾರಿ ಮಾಡಲು ಯತ್ನಿಸಿದವರ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಡಿಸಿಗೆ ದೂರು ನೀಡಿದ್ದಾರೆ. ಇದೇ ವಿಚಾರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದ್ದಾರೆ.


Spread the love