ಪ್ರಧಾನಿ ಮೋದಿ ಹುಟ್ಟು ಹಬ್ಬವನ್ನು ‘ನಿರುದ್ಯೋಗ ದಿನ’ವನ್ನಾಗಿ ಆಚರಿಸಿದ ಎನ್.ಎಸ್.ಐ.ಯು

Spread the love

ಪ್ರಧಾನಿ ಮೋದಿ ಹುಟ್ಟು ಹಬ್ಬವನ್ನು ‘ನಿರುದ್ಯೋಗ ದಿನ’ವನ್ನಾಗಿ ಆಚರಿಸಿದ ಎನ್.ಎಸ್.ಐ.ಯು

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬವನ್ನು ದ.ಕ.ಜಿಲ್ಲಾ ಎನ್.ಎಸ್.ಐ.ಯು ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಗುರುವಾರ ‘ನಿರುದ್ಯೋಗ ದಿನ’ವನ್ನಾಗಿ ಆಚರಿಸಲಾಯಿತು.

ಈ ವೇಳೆ ವಿದ್ಯಾರ್ಥಿಗಳು ನಿರುದ್ಯೋಗ ಪ್ರಮಾಣ ಹೆಚ್ಚಳದ ವಿರುದ್ಧ ಪಕೋಡಾ ತಯಾರಿ ಬಗ್ಗೆ ಅಣುಕು ಪ್ರದರ್ಶನ ಮಾಡಿದರು.

ದ.ಕ.ಜಿಲ್ಲಾ ಎನ್.ಎಸ್.ಐ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ, ವರ್ಷಕ್ಕೆ 12 ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಂದು ದೇಶದಲ್ಲಿ ಎರಡುವರೆ ಕೋಟಿಯಷ್ಟು ಉದ್ಯೋಗವನ್ನು ನಷ್ಟವಾಗುವಂತಹ ಸನ್ನಿವೇಶಕ್ಕೆ ತಂದೂಡಿದೆ. ಅವೈಜ್ಞಾನಿಕವಾಗಿ ಲಾಕ್ ಡೌನ್ ಅನ್ನು ಜಾರಿಗೊಳಿಸಿ ಬಡವರನ್ನು, ವಿದ್ಯಾರ್ಥಿಗಳನ್ನು ಬೀದಿಗಿಳಿಯುವಂತೆ ಮಾಡಿದೆ. ಇಂಜಿನಿಯರ್ ವಿದ್ಯಾರ್ಥಿಗಳು, ವಿದೇಶದಿಂದ ಬಂದವರು, ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ 250 ರೂ. ವೇತನ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದ.ಕ. ಜಿಲ್ಲೆಯಲ್ಲಿ ಹಲವಾರು ವಿದ್ಯಾ ಸಂಸ್ಥೆಗಳಿದ್ದು, ಇಲ್ಲಿ ಪದವಿ ಮುಗಿಸಿದ ವಿದ್ಯಾರ್ಥಿಗಳು ವಿದೇಶದಲ್ಲಿ, ಇತರೆ ರಾಜ್ಯದಲ್ಲಿ ಕೂಲಿ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದೇಶದಲ್ಲಿ ಉದ್ಯೋಗ ಸೃಷ್ಟಿಸದಿದ್ದರೆ ವಿದ್ಯಾರ್ಥಿ ಹಾಗೂ ಯುವ ಸಮೂಹ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಲ್ಲಿ ಸಂಶಯವಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಕಾರ್ಯದರ್ಶಿ ಫಾರೂಕ್ ಬಯಾಬೆ ಮಾತನಾಡಿ, ಕೇಂದ್ರ ಸರಕಾರ ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿ ಯುವಕರನ್ನು ವಂಚಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ ಮಂಗಳೂರು ನಗರ ಅಧ್ಯಕ್ಷ ಶೌನಕ್ ರೈ, ಆರ್.ಟಿ.ಐ ರಾಷ್ಟ್ರೀಯ ಕೋಡಿನೇಟರ್ ಅನ್ವೀತ್ ಕಟೀಲ್, ಬಂಟ್ವಾಳ ವಿಧಾನ ಸಭಾ ಅಧ್ಯಕ್ಷ ವಿನಯ್ ಕುಮಾರ್, ಕಾರ್ಯದರ್ಶಿ ಬಾತಿಶ್ ಅಳಕೆಮಜಲು, ನಜೀಬ್, ಸೌಹಾನ್ ಎಸ್.ಕೆ., ಶುಭಂ, ಶಫೀಕ್, ಮೋಕ್ಷಿತ್, ಹಸನ್ ಮತ್ತಿತರರು ಉಪಸ್ಥಿತರಿದ್ದರು.


Spread the love