ಕುಂದಾಪುರ: ವೃದ್ದೆಯನ್ನು ತಲೆಗೆ ಹೊಡೆದು ಕೊಲೆ; ಆರೋಪಿ ಬಂಧನ

Spread the love

ಕುಂದಾಪುರ: ಹಣಕ್ಕಾಗಿ ಪೀಡಿಸಿದಾಗ ಕೊಡಲೊಪ್ಪದ ವೃದ್ಧೆ ಮಹಿಳೆಯ ತಲೆಗೆ ಅಳಿಯನೇ ಹೊಡೆದು ದಾರುಣವಾಗಿ ಸಾಯಿಸಿದ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ತಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ. ಉಪ್ಪಿನಕುದ್ರು ರಾಮಮಂದಿರದ ಸಮೀಪದ ಅಂಗಡಿಮನೆ ನಿವಾಸಿ ದಿ. ರಾಮಕೃಷ್ಣ ಶೇರೆಗಾರ್ ಎಂಬುವರ ಪತ್ನಿ ಜಾನಕಿ(80) ಎಂಬಾಕೆಯೇ ಹತ್ಯೆಗೀಡಾದವಳು. ಆಕೆಯ ಮಗಳ ಗಂಡ ಬೈಂದೂರಿನ ಮಯ್ಯಾಡಿ ನಿವಾಸಿ ಜನಾರ್ಧನ ಶೇರೆಗಾರ್(45) ಎಂಬಾತನೇ ಕೊಲೆ ಆರೋಪಿ.

3 2

ಘಟನೆಯ ವಿವರ: ಜಾನಕಿ ಎಂಬುವರ ಏಕೈಕ ಪುತ್ರಿ ಪುಷ್ಪಾ ಎಂಬಾಕೆಯನ್ನು ಬೈಂದೂರಿನ ಜನಾರ್ಧನ ಶೇರೆಗಾರ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿದ್ದು ಇಪ್ಪತ್ತು ಪ್ರಾಯದ ಮಗನಿದ್ದಾನೆ. ಮೂವರೂ ಬೆಂಗಳೂರಿನಲ್ಲಿ ವಾಸವಿದ್ದು, ಜನಾರ್ಧನ ರೋಸ್ ಕೆಲಸಕ್ಕೆ ಹೋಗುತ್ತಿದ್ದ. ಪತ್ನಿ ಪುಷ್ಪಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಳು. ಮೂರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪುಷ್ಪಾಳ ಕೊಲೆಯಾಗಿತ್ತೆನ್ನಲಾಗಿದೆ. ತದ ನಂತರ ಅಳಿಯ ಪತ್ನಿಯ ತವರು ಮನೆಗೆ ಬಂದಿರಲಿಲ್ಲ.

ಒಂದು ವಾರದ ಹಿಂದೆ ಬೆಂಗಳೂರಿನಿಂದ ಬೈಂದೂರಿಗೆ ಬಂದಿದ್ದ ಜನಾರ್ಧನ ಮೃತ ಜಾನಕಿಯ ಮೊಮ್ಮಕ್ಕಳ ಮದುವೆಯ ಕಾರಣವೊಡ್ಡಿ ಉಪ್ಪಿನಕುದ್ರುವಿನಲ್ಲಿಯೇ ನಿಂತಿದ್ದ ಎನ್ನಲಾಗಿದೆ. ಹಳೆ ಮನೆಯಲ್ಲಿ ಮೊದಲು ವೃದ್ಧೆ ಒಬ್ಬರೇ ವಾಸಿಉತ್ತಿದ್ದು, ಅಳಿಯ ಬಂದ ಮೇಲೆ ಅವರಿಬ್ಬರು ಇದ್ದರೆನ್ನಲಾಗಿದೆ. ಕಳೆದ ಒಂದು ವಾರದಿಂದ ಅತ್ತೆಯನ್ನು ಅಳಿಯ ಜನಾರ್ಧನ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದ್ದು, ಅತ್ತೆಯ ಬಳಿ ಕೊಡಲು ಹಣ ಇಲ್ಲ ಎನ್ನುವ ಕಾರಣಕ್ಕೆ ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಇಬ್ಬರ ನಡುವೆ ಜಗಳ ನಡೆದಿದೆ. ಈ ಸಂದರ್ಭ ಅತ್ತೆ ಅಳಿಯನಿಗೆ ಊಟ ಬಡಿಸಿಟ್ಟಿದ್ದರು. ಆದರೆ ಊಟ ಮಾಡದ ಅಳಿಯ ಅತ್ತೆಯೊಂದಿಗೆ ಜಗಳ ಮುಂದುವರೆಸಿದ್ದಾನೆ. ಸುಮಾರು 10.30ರ ಸುಮಾರಿಗೆ ಮನೆಯಂಗಳದಲ್ಲಿ ನಿಂತಿದ್ದ ಅತ್ತೆ ನಡೆಯಲು ಬಳಸುತ್ತಿದ್ದ ಊರುಗೋಲಿನಿಂದ ಅತ್ತೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೊಡೆತಕ್ಕೆ ವೃದ್ಧೆಯ ತಲೆ ಎರಡು ಭಾಗವಾಗಿದ್ದು, ಅಲ್ಲಿಯೇ ಬಿದ್ದು ಸಾವನ್ನಪ್ಪಿದ್ದಾರೆ.

ಅಂಗಡಿ ಮನೆ ಪ್ರದೇಶದಲ್ಲಿ ದೂರ ದೂರ ಮನೆಗಳಿದ್ದು, ಎಲ್ಲರೂ ಮಲಗಿದ ನಂತರ ಜೋರಾಗಿ ಬೊಬ್ಬೆ ಕೇಳಿಸುತ್ತಿದ್ದುದನ್ನು ಆಲಿಸಿದ ಮನೆ ಸಮೀಪದ ಮಹಿಳೆಯೊಬ್ಬರು ಅನತಿ ದೂರದಲ್ಲಿ ವಾಸಿಸುತ್ತಿದ್ದ ವೃದ್ಧೆಯ ಎರಡನೇ ಮಗ ಗಣೇಶನಿಗೆ ಸುದ್ಧಿ ಮುಟ್ಟಿಸಿದ್ದಾರೆ. ಆದರೆ ಮಗ ಬರುವಷ್ಟರಲ್ಲಿ ವೃದ್ಧೆ ಕೊಲೆಯಾಗಿದ್ದರು.

ಮದುವೆ ಮನೆಯಲ್ಲಿ ಸೂತಕದ ಛಾಯೆ: ಬುಧವಾರ ಗಣೇಶ್‍ರವರ ಅಣ್ಣನ ಮಗಳ ವಿವಾಹವು ಉಪ್ಪಿನಕುದ್ರು ರಾಮಮಂದಿರದ ಸಭಾಭವನದಲ್ಲಿ ನಡೆಯಲಿದ್ದು, ನೆಂಟರಿಷ್ಟರೆಲ್ಲಾ ಬರುವವರಿದ್ದರು. ವೃದ್ಧೆಯ ಸಾವಿನಿಂದಾಗಿ ಮದುವೆಯ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಅಲ್ಲದೇ ಜೂ,12ಕ್ಕೆ ಗಣೇಶ್ ಅವರ ತಮ್ಮನ ಮದುವೆಯೂ ನಡೆಯುವುದಿತ್ತು ಎನ್ನಲಾಗಿದೆ.

ಆರೋಪಿ ಬಂಧನ : ಅತ್ತೆಯ ತಲೆಗೆ ಹೊಡೆದು ಆಕೆಯನ್ನು ಬರ್ಬರವಾಗಿ ಸಾಯಿಸಿದ ನಂತರ ಆರೋಪಿ ಜನಾರ್ಧನ ಏನೂ ತಿಳಿಯದವನಂತೆ ಮನೆಯೊಳಗೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡು ಆರಾಮವಾಗಿ ನಿದ್ದೆ ಮಾಡಿದ್ದಾನೆ. ಸ್ಥಳಕ್ಕಾಗಮಿಸಿದ ಕುಂದಾಪುರ ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ, ಡಿವೈಎಸ್‍ಪಿ ಎಂ. ಮಂಜುನಾಥ ಶೆಟ್ಟಿ, ಉಪನಿರೀಕ್ಷಕ ದೇವೇಂದ್ರ ಹಾಗೂ ಸಿಬ್ಬಂದಿಗಳು ಮನೆಯ ಬಾಗಿಲನ್ನು ಒಡೆಯಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದ್ದು, ಮೃತದೇಹವನ್ನು ಕುಂದಾಪುರ ಸರ್ಕಾರೀ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.


Spread the love