ಕೃಷಿಯನ್ನು ಕಡೆಗಣಿಸಿದರೆ ಈ ನಾಡು ಅಭಿವೃದ್ಧಿಯಾಗದು : ಮಿಜಾರುಗುತ್ತು ಆನಂದ ಆಳ್ವ
ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಕೇವಲ ಸಾಹಿತ್ಯ ಸಮ್ಮೇಳನವಷ್ಟೇ ಅಲ್ಲ. ನಾಡಿಗೇ ಅನ್ನದಾತನಾದ ಕೃಷಿಕನಿಗೆ ಪ್ರಾಮುಖ್ಯತೆ ನೀಡುವ ಒಂದು ಉತ್ಸವವೂ ಹೌದು. ಈ ಹಿನ್ನೆಲೆಯಲ್ಲಿ ನುಡಿಸಿರಿ ಭಾಗವಾಗಿ ಆಳ್ವಾಸ್ ಕೃಷಿಸಿರಿಯನ್ನು ಇಂದು ಉದ್ಘಾಟಿಸಲಾಯಿತು. ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿತವಾದ ಶಿರ್ತಾಡಿ ಧರ್ಮಸಾಮ್ರಾಜ್ಯ ಕೃಷಿ ಆವರಣದಲ್ಲಿ ಮಿಜಾರುಗುತ್ತು ಆನಂದ ಆಳ್ವ ಅವರು ಕೃಷಿಸಿರಿಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, `ಕೃಷಿಯನ್ನು ಕಡೆಗಣಿಸಿದರೆ ಈ ನಾಡು ಅಭಿವೃದ್ಧಿಯಾಗದು. ಕರ್ನಾಟಕದಲ್ಲಿ ಕೃಷಿ ಕ್ಷೇತ್ರದಲ್ಲಿ ಆಶಾದಾಯಕ ವಾತಾವರಣ ಸೃಷ್ಟಿಯಾಗಿ ಸುಂದರ ನಾಳೆಗಳ ನಿರ್ಮಾಣವಾಗಬೇಕಿದೆ. ಈ ಮೂಲಕ ನಾಡು ಸುಭಿಕ್ಷವಾಗಬೇಕು’ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ್ದ ಧರ್ಮಸ್ಥಳದ ಎಸ್.ಕೆ.ಡಿ. ಆರ್.ಡಿ.ಪಿ. ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ಮಾತನಾಡಿ, `ನಮ್ಮ ದೇಶದಲ್ಲಿ ಇಂದು ಕೃಷಿ ದ್ವಂದ್ವ ಪರಿಸ್ಥಿತಿಯಲ್ಲಿದೆ. ಆಧುನಿಕತೆಗೆ ಸಂಪೂರ್ಣ ಒಗ್ಗಿಕೊಳ್ಳಲಾರದೇ, ಸಾಂಪ್ರದಾಯಿಕ ಕೃಷಿ ಪದ್ಧತಿಗಳಿಂದ ಹೆಚ್ಚಿನ ಆದಾಯ ಗಳಿಸಲಾಗದೇ ಕೃಷಿಕರು ಸೋಲುತ್ತಿದ್ದಾರೆ. ಇಂದಿನ ದಿನಗಳಲ್ಲಿ ವೈಜ್ಞಾನಿಕ ಕೃಷಿಗೆ ಮಹತ್ವ ನೀಡಬೇಕಿದೆ. ಕೃಷಿಯಲ್ಲಿ ತಕ್ಕಮಟ್ಟಿಗೆ ಯಾಂತ್ರೀಕರಣ ವಿಧಾನವನ್ನು ಅನುಸರಿಸುವುದರಿಂದ ಕೃಷಿಕನ ಮುಖದಲ್ಲಿ ಗೆಲುವಿನ ನಗುವನ್ನು ಕಾಣಬಹುದು. ಕೃಷಿ ವಿಜ್ಞಾನಿಗಳು ಮಾಡಿದ ಸಂಶೋಧನೆಗಳನ್ನು ಅನುಷ್ಠಾನಕ್ಕೆ ತಂದರೆ ಭಾರತದ ಕೃಷಿಯಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣಬಹುದು’ ಎಂದರು.
ನಮ್ಮಲ್ಲಿ ಕೃಷಿ ಮೇಲೆ ಅವಲಂಬಿತರಾದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಕೃಷಿಯಿಂದ ಬರುವ ಆದಾಯ ಮಾತ್ರ ಶೇ.2ಕ್ಕೆ ಸೀಮಿತಗೊಳ್ಳುತ್ತಿದೆ. ಕೃಷಿಕರ ಸಂಖ್ಯೆ ಕಡಿಮೆಯಾದಾಗ ಮಾತ್ರ ಕೃಷಿ ರಂಗದಲ್ಲಿ ಹೆಚ್ಚಿನ ಲಾಭ ಗಳಿಸಲು ಸಾಧ್ಯ. ಉದಾಹರಣೆಗೆ ಜರ್ಮನಿಯಲ್ಲಿ ಅತಿ ಕಡಿಮೆ ಭೂಮಿಯಲ್ಲಿ ಕೃಷಿ ಮಾಡಿ ಶೇ.75 ಲಾಭ ಗಳಿಸಿದವರಿದ್ದಾರೆ. ಇಂತಹ ಬದಲಾವಣೆಗಳಾಗುವುದು ವೈಜ್ಞಾನಿಕ ಕೃಷಿಯನ್ನು ಅವಲಂಬಿಸಿದಾಗ ಮಾತ್ರ ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಅಭಯಚಂದ್ರ ಜೈನ್, `ನಮ್ಮಲ್ಲಿ ಕೃಷಿ ಅಭಿವೃದ್ಧಿ ಹೊಂದಬೇಕೆಂಬ ಉದ್ದೇಶದಿಂದ ಕೃಷಿಸಿರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೃಷಿ ಮೇಲೆ ಅವಲಂಬಿತರಾಗಿ ಬದುಕು ಕಟ್ಟಿಕೊಂಡವರು ನಮ್ಮಲ್ಲಿ ಬಹಳ ಜನ ಇದ್ದಾರೆ. ಅವರ ಸ್ವಾಭಿಮಾನದ ಬದುಕು ನಮ್ಮೆಲ್ಲರಿಗೂ ಮಾದರಿಯಾಗುವಂತಹದ್ದು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರದಲ್ಲಿ ಕಾನೂನುಗಳನ್ನು ಅಭಿವೃದ್ಧಿಪಡಿಸಿ ಕೃಷಿಕರಿಗೆ ಸಹಾಯ ಮಾಡಲು ಸರಕಾರ ಮುಂದಾಗಿದೆ. ಆದರೆ ಸರಕಾರೇತರ ಸಂಘ-ಸಂಸ್ಥೆಗಳೂ ಕೂಡ ಕೃಷಿ ಕ್ಷೇತ್ರದ ಬಗ್ಗೆ ಗಮನ ಹರಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕೃಷಿಸಿರಿಯಂತಹ ಕಾರ್ಯಕ್ರಮಗಳು ಮುಖ್ಯವಾದವು’ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಹಿರಿಯ ಕೃಷಿ ತಜ್ಷ ಡಾ.ಎಲ್.ಸಿ. ಸೋನ್ಸ್, ಮಂಗಳೂರು ಪಶು ಸಂಶೋಧನಾ ಇಲಾಖೆಯ ಉಪನಿರ್ದೇಶಕ ಡಾ.ತಿಪ್ಪೇಸ್ವಾಮಿ, ಕೃಷಿ ಇಲಾಖೆಯ ಸಹ ನಿರ್ದೇಶಕ ಕೆಂಪೇಗೌಡ ಮತ್ತಿತರು ಭಾಗವಹಿಸಿದ್ದರು.
            












