ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆರೋಪ ಸುಳ್ಳು, ಜನರ ದಾರಿ ತಪ್ಪಿಸಬೇಡಿ: ನಿರ್ಮಲಾ ಸೀತಾರಾಮನ್

Spread the love

ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ ಆರೋಪ ಸುಳ್ಳು, ಜನರ ದಾರಿ ತಪ್ಪಿಸಬೇಡಿ: ನಿರ್ಮಲಾ ಸೀತಾರಾಮನ್

ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ರಾಜ್ಯ ಸರ್ಕಾರದ ಆರೋಪವನ್ನು ತಳ್ಳಿಹಾಕಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜನರ ದಾರಿ ತಪ್ಪಿಸಬೇಡಿ, ಅಂಕಿ ಅಂಶವನ್ನು ನೋಡುವಂತೆ ಮನವಿ ಮಾಡಿದರು. ತೀವ್ರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಅಡಿಯಲ್ಲಿ ತಕ್ಷಣವೇ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಒಂದು ದಿನದ ನಂತರ ಸೀತಾರಾಮನ್ ಅವರು ಈ ಸ್ಪಷ್ಟನೆಯನ್ನು ನೀಡಿದ್ದಾರೆ.

15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರವು ತನ್ನ ‘ವಿಶೇಷ ಅನುದಾನ’ದ ಬಾಕಿ ಪಾಲನ್ನು ಬಿಡುಗಡೆ ಮಾಡುತ್ತಿಲ್ಲ ಎಂಬ ಕರ್ನಾಟಕ ಸರ್ಕಾರದ ಹೇಳಿಕೆಯನ್ನು ಇಂದು ತಳ್ಳಿಹಾಕಿದ ನಿರ್ಮಲಾ ಸೀತಾರಾಮನ್, ಹಣಕಾಸು ಆಯೋಗದ ಅಂತಹ ಯಾವುದೇ ಶಿಫಾರಸು ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಕ್ಕೆ 5,495 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಇದು ಸಂಪೂರ್ಣ ಸುಳ್ಳು. ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ಅಂತಹ ಯಾವುದೇ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ ಎಂದರು.

ಬೆಂಗಳೂರಿನ ಜಯನಗರದ ಚಿಂತಕರ ವೇದಿಕೆ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕರ್ನಾಟಕಕ್ಕೆ ಬರಬೇಕಾದ ಪ್ರತಿಯೊಂದು ಪೈಸೆಯನ್ನು ಸಕಾಲದಲ್ಲಿ ನೀಡಲಾಗಿದೆ ಮತ್ತು ನೀಡಲಾಗುತ್ತದೆ ಎಂದು ನಿಮಗೆ ವಿವರವಾಗಿ ಹೇಳಲು ನಾನು ಬಯಸುತ್ತೇನೆ ಎಂದರು.

ಎಫ್ಎಂ ಪ್ರಕಾರ, 2014 ಮತ್ತು 2024 ರ ನಡುವೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ತೆರಿಗೆ ಹಂಚಿಕೆ ಶೇಕಡಾ 258 ರಷ್ಟು ಹೆಚ್ಚಾಗಿದೆ. ಇದು ಹಿಂದಿನ ಯುಪಿಎ (ಕಾಂಗ್ರೆಸ್ ನೇತೃತ್ವದ ಮಿತ್ರ ಪಕ್ಷಗಳ ಒಕ್ಕೂಟ) ಆಡಳಿತದ 10 ವರ್ಷಗಳಿಗೆ ಹೋಲಿಸಿದರೆ ಇದು 3.5 ಪಟ್ಟು ಹೆಚ್ಚಾಗಿದೆ. ಅಂದರೆ, 10 ವರ್ಷಗಳ ಬಿಜೆಪಿ ಆಡಳಿತದಲ್ಲಿ ರಾಜ್ಯಕ್ಕೆ ನೀಡಿದ ಅನುದಾನವು 273 ಪ್ರತಿಶತ ಹೆಚ್ಚಳವಾಗಿದೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ 2004 ರಿಂದ 2014 ರ ನಡುವೆ ಕರ್ನಾಟಕಕ್ಕೆ ವರ್ಷಕ್ಕೆ 81,795 ಕೋಟಿ ರೂಪಾಯಿ ಬಂದಿತ್ತು. ಆದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ 2014 ರಿಂದ 2024 ರವರೆಗೆ 2,93,226 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ಆದರೆ, ನಾವು ಇಷ್ಟು ಕೊಟ್ಟಿದ್ದೇವೆ ಅಥವಾ ಏನನ್ನೂ ನೀಡಿದ್ದೇವೆ ಎಂದು ಯಾರೂ ಹೆಮ್ಮೆಪಡುವುದಿಲ್ಲ. ದಯವಿಟ್ಟು ಅಂಕಿಅಂಶಗಳನ್ನು ನೋಡಿ, ಹಣದ ದಿನಾಂಕಗಳನ್ನು ನೋಡಿ. ಜನರನ್ನು ತಪ್ಪುದಾರಿಗೆಳೆಯುವುದು ಸರಿಯಲ್ಲ ಎಂದರು.


Spread the love