ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

Spread the love

ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಯುವ ಕಾಂಗ್ರೆಸ್ ಆಕ್ರೋಶ

ಉಡುಪಿ: ನನಗೆ 60 ದಿನ ಕೊಡಿ, ಆಕಾಶದಲ್ಲಿರುವ ಚಂದ್ರನನ್ನು ತಂದು ನಿಮ್ಮ ಕೈಯಲ್ಲಿ ಇಡುತ್ತೇನೆ ಎಂದು ಜನರಿಗೆ ಸುಳ್ಳು ಆಮಿಷವನ್ನು ಒಡ್ಡಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಆಡಳಿತದ ಕೇಂದ್ರ ಸರಕಾರ ಜನರಿಗೆ ಮೋಸ ಮಾಡುತ್ತಿದೆ ಎಂದು ಕಾಪು ವಿಧಾನ ಸಭಾಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ, ನ್ಯಾಯವಾದಿ ಮೆಲ್ವಿನ್‍ಡಿಸೋಜ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದೈನಂದಿನ ದಿನಬಳಕೆಯ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಪ್ರತಿದಿನ ಎಂಬಂತೆ ಏರಿಕೆಯಾಗುತ್ತಿದೆ. ಒಂದು ಲೀಟರ್ ಪೆಟ್ರೋಲ್ ಬೆಲೆ 75 ರೂಪಾಯಿಯಿಂದ 86 ರೂಪಾಯಿ ಆಗಿದ್ದು, ಡಿಸೇಲ್ ಬೆಲೆ ಏರಿಕೆ ಪೆಟ್ರೋಲ್ ಬೆಲೆಯನ್ನು ಮೀರಿಸುವ ಹಂತಕ್ಕೆ ಬಂದು ನಿಂತಿದೆ. ಇದೇನಾ ಮೋದಿಯವರು ಹೇಳಿದ ಅಚ್ಚೇದಿನ್? ಇದು ಮೋದಿಯವರ ಆಡಳಿತದ ಅತ್ಯಂತ ಬುರೇದಿನ್. ಮೋದಿಯವರು ವರ್ಷದಲ್ಲಿ 15 ಕ್ಕೂ ಹೆಚ್ಚು ಬಾರಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಪ್ರಧಾನ ಸೇವಕ ಆಗಿದ್ದಾರೆ.

ಬೇರೆ ಎಲ್ಲಾ ವಿಚಾರಗಳಲ್ಲಿ ಮೂಗು ತೂರಿಸುವ ನಮ್ಮ ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಸಂಸದೆ ಶೋಭಾ ಕರಂದ್ಲಾಜೆಯವರು ಬೆಲೆ ಏರಿಕೆ ಬಗ್ಗೆ ತುಟಿಪಿಟಿಕ್ ಎನ್ನುತ್ತಿಲ್ಲ. ಹೆದ್ದಾರಿ ದರುವಸ್ಥೆ, ಪೆಟ್ರೋಲ್, ಗ್ಯಾಸ್‍ಬೆಲೆ ಏರಿಕೆ, ರೈತರ ಸಾಲ ಮನ್ನಾ, ಟೋೀಲ್ ಸಂಗ್ರಹ ಮುಂತಾದ ವಿಚಾರಗಳ ಬಗ್ಗೆ ಸಂಸದರು ಮಾತನ್ನೇ ಎತ್ತುತ್ತಿಲ್ಲ. ಸಂಸದರು ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ಕಾಣಸಿಗುವುದೇ ಬಹಳ ವಿರಳವಾಗಿದೆ.

ಜನಸಾಮಾನ್ಯರಿಗೆ ಪ್ರಯೋಜನವಾಗುವ ಯಾವುದೇ ಕಾರ್ಯಕ್ರಮಗಳನ್ನು ಕೈಗೊಳ್ಳದ ಕೇಂದ್ರ ಸರಕಾರದ ಉದ್ಯಮಿಗಳ, ಕಾಪೋರೇಟ್ ಸಂಸ್ಥೆಗಳ ಉದ್ದಾರಕ್ಕಾಗಿ ಕೆಲಸ ಮಾಡುತ್ತಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲಾಗದ ಕೇಂದ್ರ ಸರಕಾರ ಅಧಿಕಾರದಲ್ಲಿ ಮುಂದುವರಿಯಲು ಯೋಗ್ಯವಲ್ಲ. ಕಾಂಗ್ರೆಸ್ ಸರಕಾರವಿರುವಾಗ ಬೆಲೆ ಏರಿಕೆಯ ಬಗ್ಗೆ ದೊಡ್ಡ ದೊಡ್ಡ ಭಾಷಣ ಬಿಗಿಯುತ್ತಿದ್ದ ಬಿಜೆಪಿಯ ನಾಯಕರು ಈಗ ಬಾಯಿಗೆ ಬೀಗಹಾಕಿ ಕುಳಿತಿದ್ದಾರೆ. ಕೇಂದ್ರ ಸರಕಾರ ಕೂಡಲೇ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಜನರ ಭವಣೆಗೆ ಸ್ಪಂದಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬೆಲೆ ಏರಿಕೆ ವಿರೋದಿಸಿ ಯುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದು ಮೆಲ್ವಿನ್‍ ಡಿಸೋಜರವರು ತಿಳಿಸಿದ್ದಾರೆ.


Spread the love