ಕೇರಳಕ್ಕೆ ಗೋವಾ ಮದ್ಯ ಸಾಗಾಟ: ಆರೋಪಿ ಸೇರಿದಂತೆ 114 ಪೆಟ್ಟಿಗೆ ಮದ್ಯ, ವಾಹನ ವಶಕ್ಕೆ

Spread the love

ಕೇರಳಕ್ಕೆ ಗೋವಾ ಮದ್ಯ ಸಾಗಾಟ: ಆರೋಪಿ ಸೇರಿದಂತೆ 114 ಪೆಟ್ಟಿಗೆ ಮದ್ಯ, ವಾಹನ ವಶಕ್ಕೆ

ಉಳ್ಳಾಲ: ಗೂಡ್ಸ್ ಟೆಂಪೋದಲ್ಲಿ ಗೋವಾ ಮದ್ಯದ ಪೆಟ್ಟಿಗೆಗಳನ್ನು ಕೇರಳಕ್ಕೆ ಸಾಗಾಟ ನಡೆಸುತ್ತಿದ್ದ ವ್ಯಕ್ತಿಯನ್ನು ಮುಡಿಪು- ನೆತ್ತಿಲಪದವು ಎಂಬಲ್ಲಿ ಅಬಕಾರಿ ಪೊಲೀಸರು ಬಂಧಿಸಿ ಆತನಿಂದ ರೂ.6,87,720 ಮದ್ಯ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆಯೂ ತೆಂಗಿನ ಗೆರಟೆಗಳನ್ನು ಮೇಲಿಟ್ಟು ಸಾರಾಯಿ ಸಾಗಾಟ ನಡೆಸಿ ಬಂಧಿತನಾಗಿದ್ದ ಆರೋಪಿ ಇದೀಗ ಮತ್ತದೇ ಮಾದರಿಯಲ್ಲಿ ಅಕ್ರಮ ಸಾಗಾಟ ನಡೆಸುವ ಮೂಲಕ ಕರ್ನಾಟಕ ಅಬಕಾರಿ ಪೊಲೀಸರಿಂದ ಬಂಧಿತನಾಗಿದ್ದಾನೆ.

ಹೊನ್ನಾವರ ನಿವಾಸಿ ರಾಧಾಕೃಷ್ಣ ಕಾಮತ್ ಯಾನೆ ಸದಾನಂದ ಕಾಮತ್ ಬಂಧಿತ. ಆರೋಪಿ ಅಶೋಕ್ ಲೈಲಾಂಡ್ ಗೂಡ್ಸ್ ಟೆಂಪೋದಲ್ಲಿ ಹೊರಭಾಗದಲ್ಲಿ ತೆಂಗಿನ ಗೆರಟೆಗಳನ್ನು ಇಟ್ಟು, ಒಳಗೆ ಮದ್ಯದ ಬಾಟಲಿಗಳನ್ನು ಇಟ್ಟು ಸಾಗಾಟ ನಡೆಸುತ್ತಿದ್ದ. ಮುಡಿಪು-ನೆತ್ತಿಲಪದವು ಮಾರ್ಗವಾಗಿ 114 ಪೆಟ್ಟಿಗೆಗಳಲ್ಲಿ ಗೋವಾ ಮದ್ಯ ಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ.

ಅಬಕಾರಿ ಜಂಟಿ ಆಯುಕ್ತ ಮಂಗಳೂರು ವಿಭಾಗ ನಿರ್ದೇಶನದಂತೆ , ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಅಬಕಾರಿ ಉಪ-ಅಧೀಕ್ಷಕ, ಉಪವಿಭಾಗ ಬಂಟ್ವಾಳ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಲಕ್ಷ್ಮಣ್ ಶಿವಣಗಿ ಮತ್ತು ಸಿಬ್ಬಂದಿ ಸುನಿಲ್ ಬೈಂದೂರು, ದೊಡ್ಡಪ್ಪ ಮತ್ತು ಸದಾಶಿವ ಹಕ್ಕ, ರವಿ ನಾರ್ವೇಕರ್, ಅರ್ಜುನ ಭಾಗೋಡಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

2023ರ ಜು.9 ರಂದು 2484 ಲೀ ಅಕ್ರಮ ಸಾರಾಯಿ ಕೇರಳಕ್ಕೆ ಸಾಗಾಟ ನಡೆಸುವ ಸಂದರ್ಭ ಕಾಸರಗೋಡಿನಲ್ಲಿ ಕೇರಳದ ಪೊಲೀಸರು ಅಂದು ಬಂಧಿಸಿದ್ದರು. ತೆಂಗಿನ ಗೆರಟೆಗಳನ್ನು ಮೇಲಿಟ್ಟು, ಅದರೊಳಗೆ ಮದ್ಯದ ಬಾಟಲಿಗಳನ್ನಿಟ್ಟು ಕೊಂಡೊಯ್ಯುವ ಸಂದರ್ಭ ಬಂಧಿಸಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಂಡ ª ಕಾಮತ್ ಮತ್ತೆ ಸಾಗಾಟ ನಡೆಸಿದ್ದಾರೆ


Spread the love