ಕೋಟ ಅವಳಿ ಕೊಲೆ ಆರೋಪಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ನ್ಯಾಯಾಲಯಕ್ಕೆ ಶರಣು

Spread the love

ಕೋಟ ಅವಳಿ ಕೊಲೆ ಆರೋಪಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ನ್ಯಾಯಾಲಯಕ್ಕೆ ಶರಣು

ಕುಂದಾಪುರ: ಉಡುಪಿ ಜಿಲ್ಲೆಯ ಕೋಟದಲ್ಲಿ ನಡೆದ ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿ, ಜಿಲ್ಲಾ ಪಂಚಾಯತ್ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್ ಕೊನೆಗೂ ಶುಕ್ರವಾರ ಪೊಲೀಸರಿಗೆ ಶರಣಾಗಿದ್ದಾನೆ.

ಕಳೆದ ವರ್ಷ ಕೋಟ ಸಮೀಪದ ಮಣೂರಿನಲ್ಲಿ ನಡೆದ ಭರತ್ ಮತ್ತು ಆತನ ಸ್ನೇಹಿತ ಯತೀಶ್ ಕೊಲೆ ಪ್ರಕರಣದಲ್ಲಿ ಕೊಲೆಯ ಸಂಚು ರೂಪಿಸಿದ ಆರೋಪ ಈತನ ಮೇಲಿತ್ತು. ರಾಘವೇಂದ್ರ ಕಾಂಚನ್ ಪಡೆದ ಜಾಮೀನು ಸರ್ವೋಚ್ಚ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಆದೇಶವಾಗಿ ಹದಿನೈದು ದಿನ ಕಳೆದರೂ ಪೊಲೀಸರು ಈತನನ್ನು ಬಂಧಿಸಿರಲಿಲ್ಲ. ಈಬಗ್ಗೆ ಮೃತರ ಮನೆಯವರು ಹೋರಾಟದ ಎಚ್ಚರಿಕೆ ನೀಡಿದ್ದರು.

ಶುಕ್ರವಾರ ವಕೀಲರ ಮೂಲಕ ಆಗಮಿಸಿದ ರಾಘವೇಂದ್ರ ಕಾಂಚನ್ ಶರಣಾಗತಿಯಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಹಿರಿಯಡಕ ಕಾರಾಗೃಹಕ್ಕೆ ರವಾನಿಸಲಾಗಿದೆ.

ಕಳೆದ ವರ್ಷ ಜನವರಿ 26ರಂದು ರಾತ್ರಿ ಸುಮಾರು 10.30ರ ಸುಮಾರಿಗೆ ಭರತ್ ಮತ್ತು ಆತನ ಸ್ನೇಹಿತ ಯತೀಶನನ್ನು ಕೊಲೆ ಮಾಡಲಾಗಿತ್ತು. ಇದರಲ್ಲಿ ಭಾಗಿಯಾದ 18 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕೆಲವು ಆರೋಪಿಗಳು ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯನಾದ ರಾಘವೇಂದ್ರ ಕಾಂಚನ್ ಉಚ್ಛ ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದು, ಈ ಬಗ್ಗೆ ಭರತ್ ತಾಯಿ ಪಾರ್ವತಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯವು ಹೈಕೋರ್ಟ್ ನೀಡಿದ ಜಾಮೀನು ವಜಾಗೊಳಿಸಿ ಆದೇಶಿಸಿತ್ತು.

ಜಾಮೀನು ವಜಾಗೊಳಿಸಿದ ಬೆನ್ನಲ್ಲೆ ರಾಘವೇಂದ್ರ ಕಾಂಚನ್ ತಲೆಮರೆಸಿಕೊಂಡಿದ್ದು ಆರೋಪಿಯನ್ನು ರಾಜಕೀಯ ಒತ್ತಡದಿಂದ ಪೊಲೀಸರು ಬಂಧಿಸಿಲ್ಲ ಎಂದು ಕೊಲೆಯಾದ ಯುವಕರ ಕುಟುಂಬಿಕರು ಆರೋಪಿಸಿದ್ದರು. ಅಲ್ಲದೆ ಫೆ.7ರೊಳಗೆ ಆರೋಪಿಯನ್ನು ಬಂಧಿಸದಿದ್ದರೆ ಉಡುಪಿ ಎಸ್ಪಿ ಕಚೇರಿಯೆದುರು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ಕೂಡ ನೀಡಿದ್ದರು.


Spread the love