ಕೋಟ ಚಿನ್ನದಂಗಡಿ ಎರಡನೇ ಆರೋಪಿ ವಶಕ್ಕೆ

ಕೋಟ ಚಿನ್ನದಂಗಡಿ ಎರಡನೇ ಆರೋಪಿ ವಶಕ್ಕೆ

ಕೋಟ: ಕೋಟ ಬಸ್ ನಿಲ್ದಾಣದಲ್ಲಿರುವ ಶ್ರೀ ದುರ್ಗಾ ಜುವೆಲ್ಲರ್ಸ್‍ಗೆ 21ರಂದು ಸಂಜೆ ವೇಳೆ ಗ್ರಾಹಕರ ಸೋಗಿನಲ್ಲಿ ಕಳ್ಳರು ನುಗ್ಗಿ ಮಾಲಕನಿಗೆ ಹಲ್ಲೆ ಮಾಡಿ ಚಿನ್ನ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದ ಮತ್ತೋರ್ವ ಆರೋಪಿಯನ್ನು ಕೋಟ ಪೊಲೀಸ್‍ರು ವಶಕ್ಕೆ ಪಡೆದಿದ್ದಾರೆ. ಗೋವಾ ಮೂಲದ ಪ್ರಮಥೇಶ್(21) ಎನ್ನುವವನು ಸದ್ಯ ಕೋಟ ಪೊಲೀಸ್‍ರು ವಶಕ್ಕೆ ಪಡೆದು ಹಿರಿಯಡಕ ಜೈಲಿನಲ್ಲಿ ಹೆಚ್ಚಿನ ತನಿಖೆಗಾಗಿ ಇರಿಸಿದ್ದಾರೆ.

kota-jewellary-shop-theft

ಮೇ 21ರ ಸಂಜೆ ವೇಳೆಗೆ ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಆಗಮಿಸಿದ ಅಪರಿಚಿತರು, ಚಿನ್ನದ ಆಭರಣಗಳನ್ನು ತೋರಿಸುವಂತೆ ಚಿನ್ನದಂಗಡಿಯ ಮಾಲಕ ರವೀಂದ್ರ ಆಚಾರ್ಯ ಅವರಿಗೆ ತಿಳಿಸಿ, ಅವರ ತಲೆಗೆ ಹೊಡೆದು ಕೆಳಗೆ ಬೀಳಿಸಿ, ಒಳಗಿನಿಂದಲೇ ಅಂಗಡಿಯ ಶಟರ್ ಹಾಕಿ ಆಭರಣಗಳನ್ನು ಗಂಟುಕಟ್ಟಿದ್ದರು. ಪಕ್ಕದ ಅಂಗಡಿಯ ಪ್ರಭಾಕರ ಕಾಮತ್ ಅವರು ಅಸಮಯ ಪ್ರಜ್ಞೆ ಮೆರೆದು ಅಂಗಡಿಯ ಶಟರ್ ಎಳೆದಾಗ, ಪರಾರಿಯಾಗಲು ಯತ್ನಿಸುತ್ತಿದ್ದ ಓರ್ವರನ್ನು ಪಕ್ಕದ ಅಂಗಡಿಯ ಎಳೆದಾಡಿ, ದರೋಡೆ ಕೋರರು ಪರಾರಿಯಾಗಲು ಯತ್ನಿಸಿದ್ದ ಬೈಕ್‍ನ್ನು ದೂಡಿ ಹಾಕಿದ್ದರು. ಬೈಕ್ ಬಿಟ್ಟು ಓರ್ವ ದರೋಡೆಕೋರ ರಸ್ತೆಗೆ ಓಡಿ ತಪ್ಪಿಸಿಕೊಂಡಿದ್ದು, ಇನ್ನೋರ್ವ ಕೋಟ ಕಾಶಿ ಮಠದ ಪಕ್ಕದ ಗಲ್ಲಿಯ ಕತ್ತಲೆಯಲ್ಲಿ ಮರೆಯಾಗಿದ್ದರು.
ದರೋಡೆ ಪ್ರಕರಣ ನಡೆದ ಒಂದು ತಿಂಗಳ ಒಳಗೆ ದರೋಡೆಕೋರರು ಬಿಟ್ಟು ತೆರಳಿದ್ದ ಬೈಕ್ ಬೆನ್ನತ್ತಿದ್ದ ಕೋಟ ಪೊಲೀಸ್‍ರು ಪ್ರಕರಣವನ್ನು ಎಳೆ ಎಳೆಯಾಗಿ ಭೇಧಿಸಿದ್ದಾರೆ. ಬೈಕ್ ನಂಬರ್ ಪ್ಲೇಟ್ ಜಾಡು ಹಿಡಿದು ಗೋವಾದಲ್ಲಿ ತನಿಖೆ ಮಾಡಿದ ಮೂವರು ಖದೀಮರು ಗೋವಾದಲ್ಲಿ ಕಳ್ಳತನ ವಿಚಾರದಲ್ಲಿ ಅಲ್ಲಿನ ಪೊಲೀಸ್‍ರಿಗೆ ಬೇಕಾದವರಾಗಿದ್ದರು. ತನಿಖೆಯನ್ನು ಚುರುಕುಗೊಳಿಸಿದ ಕೋಟ ಪೊಲೀಸ್ ಉಪ ನಿರೀಕ್ಷಕ ಕಬ್ಬಾಳ್‍ರಾಜ್ ಅವರು ಗೋವಾ ಪೊಲೀಸ್ ಸಹಕಾರ ಪಡೆದು ಇರ್ವರನ್ನು ಪತ್ತೆ ಹಚ್ಚಿದ್ದಾರೆ. ಕೆಲವು ದಿನಗಳ ಹಿಂದೆ ಓರ್ವನನ್ನು ಗೋವಾ ಪೊಲೀಸ್ ಇಲಾಖೆಯು ಕರ್ನಾಟಕ ಪೊಲೀಸ್‍ರಿಗೆ ಹಸ್ತಾಂತರಿಸಿದ್ದರು.
ಪ್ರಕರಣದಲ್ಲಿ ಭಾಗಿಯಾಗಿದ್ದ 2ನೇ ಆರೋಪಿ ಪ್ರಮಥೇಶ್‍ನನ್ನು ಗೋವಾ ಮತ್ತು ಮಹಾರಾಷ್ಟ್ರದ ಪೊಲೀಸ್ ನೆರವಿನಲ್ಲಿ, ಆರೋಪಿ ತನ್ನ ಸಂಬಂಧಿಕರ ಮನೆಯಲ್ಲಿ ತಂಗಿದ್ದಾಗ ದಾಳಿ ಮಾಡಿ ವಶಕ್ಕೆ ಪಡೆದಿದ್ದರು. ಆರೋಪಿಯಿಂದ ಸುಮಾರು 3 ಲಕ್ಷ ಮೌಲ್ಯದ ಸೊತ್ತನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಈ ದರೋಡೆ ಪ್ರಕರಣದ ಮುಖ್ಯ ಆರೋಪಿ ದಿಲೇಶ್ವರ ಪತ್ರ ಸದ್ಯ ನೇಪಾಳದಲ್ಲಿ ತಲೆ ಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು ಕೋಟ ಪೊಲೀಸ್‍ರು ಆತನ ಪತ್ತೆ ಹಚ್ಚುವ ಕುರಿತು ಹೆಚ್ಚಿನ ತನಿಖೆ ನಡೆಸಿದ್ದಾರೆ. ಕ್ಯಾಸಿನೋ ಆಡುವ ಹುಚ್ಚಿಗೆ ಬಿದ್ದಿರುವ ಈ ಮೂವರು, ತಮ್ಮ ಆಟಕ್ಕಾಗಿ ಈ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ದಿಲೇಶ್ವರ ಪತ್ರ, ತನ್ನ ಒಂದು ಕಿಡ್ನಿಯನ್ನ ಮಾರಾಟ ಮಾಡಿ ಕ್ಯಾಸಿನೋ ಆಡುವಷ್ಟು ಈ ಆಟಕ್ಕೆ ದಾಸನಾಗಿದ್ದ ಎನ್ನುವ ವಿಚಾರವನ್ನು ಕೂಡ ಕೋಟ ಪೊಲೀಸ್‍ರು ಪತ್ತೆ ಹಚ್ಚಿದ್ದಾರೆ.
ಈ ಕೃತ್ಯ ಭೇಧಿಸುವಲ್ಲಿ ಕೋಟ ಉಪ ನಿರೀಕ್ಷಕ ಕಬ್ಬಾಳ್‍ರಾಜ್ ಹೆಚ್.ಡಿ. ಅವರು ತಮ್ಮ ಸಿಬ್ಬಂದಿಗಳೊಂದಿಗೆ ಹಗಲು ರಾತ್ರಿ ಶ್ರಮಿಸಿದ್ದಾರೆ. ಒಟ್ಟಾರೆಯಾಗಿ ಪ್ರಕರಣ ಭೇಧಿಸುವಲ್ಲಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ಬಿ ನಾಯಕ್, ಹೆಡ್ ಕಾನ್ಸ್ಟೇಬಲ್ ವಿಶ್ವನಾಥ ಖಾರ್ವಿ, ಡ್ರೈವರ್ ಜಯಂತ್ ಶೆಟ್ಟಿ, ಸಿಬ್ಬಂದಿಗಳಾದ ಸಂತೋಷ, ಸತೀಶ್ ಹಂದಾಡಿ ಮತ್ತು ಸುರೇಶ್ ಪಾಲ್ಗೊಂಡಿದ್ದರು.