ಕೋಟ ಡಬಲ್ ಮರ್ಡರ್ ; ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೇದೆಗಳ ಬಂಧನ

479

ಕೋಟ ಡಬಲ್ ಮರ್ಡರ್ ; ಸಶಸ್ತ್ರ ಮೀಸಲು ಪಡೆಯ ಇಬ್ಬರು ಪೇದೆಗಳ ಬಂಧನ

ಉಡುಪಿ: ಕೋಟ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಸಹಕಾರ ನೀಡಿದ ಹಿನ್ನೆಲೆಯಲ್ಲಿ ಇಬ್ಬರು ಡಿಎಆರ್ ಪೊಲೀಸ್ ಪೇದೆಗಳನ್ನು ತನಿಖಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆ ಪೇದೆಗಳಾದ , ಪವನ್ ಅಮಿನ್, ವಿರೇಂದ್ರ ಅಚಾರ್ಯ ಬಂಧಿತ ಆರೋಪಿಗಳಾಗಿದ್ದಾರೆ.

ಕೊಲೆ ಪ್ರಕರಣದ ಆರೋಪಿಗಳಾದ ಹರೀಶ್ ರೆಡ್ದಿ, ರಾಜಶೇಖರ ರೆಡ್ದಿ, ಮಹೇಶ ಗಾಣಿಗ, ಸಂತೋಷ ಕುಂದರ್ ಮುಂತಾದವರೊಂದಿಗೆ ಆರೋಪಿ ಪೇದೆಗಳು ಹಲವು ವರ್ಷಗಳಿಂದ ಒಡನಾಟವಿಟ್ಟುಕೊಂಡಿದ್ದರು.

ಜ.26 ರಂದು ರಾತ್ರಿ ಕೋಟಾದ ಮಣೂರಿನಲ್ಲಿ ಭರತ್ ಕುಮಾರ್ ಮತ್ತು ಯತೀಶ್ ರವರನ್ನು ರಾಜಶೇಖರ ರೆಡ್ದಿ ಮತ್ತವರ ತಂಡ ಕೊಲೆ ಮಾಡಿದ್ದು, ಅದೇ ದಿನ ರಾತ್ರಿ ಕೇಸಿನ ಎಲ್ಲಾ ಪ್ರಮುಖ ಅರೋಪಿಗಳು ಪೊಲೀಸ್ ಪೇದೆ ಪವನ್ ಅಮೀನ್ ಗೆ ಸೇರಿದ ಹೆಬ್ರಿಯ ಕುಚ್ಚೂರಿನ ಮನೆಯಲ್ಲಿ ತಂಗಿದ್ದರು . ಜ.27 ರಂದು ಬೆಳಗ್ಗೆ ಅರೋಪಿ ಹರೀಶ್ ರೆಡ್ಡಿ ಪೊಲೀಸ್ ಪೇದೆ ಪವನ್ ಅಮೀನ್ ಗೆ ಫೋನ್ ಮಾಡಿ, ಒಂದು ಸಿಮ್ , ಮೊಬೈಲ್, ಹಣ ಮತ್ತು ಕೆಲವು ವಸ್ತುಗಳನ್ನು ಕಳುಹಿಸಿ ಕೊಡಲು ಕೇಳಿದ್ದಾನೆ. ಪವನ್ ಅಮೀನ್ ಪ್ರಣವ್ ಭಟ್ ಎಂಬವನ ಮೂಲಕ ಅವುಗಳನ್ನ ಕುಚ್ಚೂರಿನಲ್ಲಿ ತನ್ನ ಮನೆಯಲ್ಲಿರುವ ಅರೋಪಿಗಳಿಗೆ ತಲುಪಿಸಿದ್ದಾನೆ. ನಂತರ ರಾತ್ರಿ ಇನ್ನೊರ್ವ ಪೊಲೀಸ್ ಪೇದೆ ವೀರೇಂದ್ರ ಅಚಾರ್ಯ ನೊಂದಿಗೆ ಸೇರಿ ಆರೋಪಿಗಳಿಗೆ ಪರಾರಿಯಾಗಲು ಕಾರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಅರೋಪಿಗಳಿಗೆ ಅಗುಂಬೆ ಎನ್ ಅರ್ ಪುರ ಮಲ್ಲಂದೂರಿನ ತನ್ನ ಸಂಬಂದಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಜ.28 ರಂದು ಅರೋಪಿಗಳನ್ನು ಮಲ್ಲಂದೂರಿನಲ್ಲಿ ಬಿಟ್ಟು ವೀರೇಂದರ್ ಅಚಾರಿಯೊಂದಿಗೆ ವಾಪಾಸ್ಸು ಕಾರಿನಲ್ಲಿ ಬರುವಾಗ ಅರೋಪಿ ಹರೀಶ್ ರೆಡ್ೞಿ ಕೊಟ್ಟ ಮೊಬೈಲ್ ಗಳನ್ನು ಮತ್ತು ಇತರೆ ವಸ್ತುಗಳನ್ನು ತಂದು ಬಚ್ಚಿಟ್ಟು ಆರೋಪಿಗಳಿಗೆ ಸಹಕಾರ ನೀಡಿದ್ದಾರೆ.

ಅರೋಪಿ ಪೊಲಿಸ್ ಪೇದೆಗಳಾದ ಪವನ್ ಅಮೀನ್ ಮತ್ತು ವೀರೇಂದ್ರ ಅಚಾರ್ಯ ಅವರಿಂದ ಕಾರು ಮೊಬೈಲ್ ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅರೋಪಿಗಳನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಫೆ.15 ರವರೆಗೆ ಅರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಮೆಡಿಕಲ್ ರವಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ರವಿಚಂದ್ರ ಪೂಜಾರಿ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದೀಗ ಇಬ್ಬರು ಪೊಲೀಸ್ ಸಿಬ್ಬಂದಿಯ ಬಂಧನದೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಒಟ್ಟು ಎಂಟಕ್ಕೇರಿದೆ.