ಕೋಟ ಡಬ್ಬಲ್ ಮರ್ಡರ್ ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ ಸೇರಿದಂತೆ ನಾಲ್ವರ ಬಂಧನ

ಕೋಟ ಡಬ್ಬಲ್ ಮರ್ಡರ್ ; ಜಿಪಂ ಸದಸ್ಯ ರಾಘವೇಂದ್ರ ಕಾಂಚನ ಸೇರಿದಂತೆ ನಾಲ್ವರ ಬಂಧನ

ಉಡುಪಿ:  ಕೋಟದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ತಂಡ ಕೋಟ ಕ್ಷೇತ್ರದ ಬಿಜೆಪಿ ಪಕ್ಷದ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ( 38)ನ್ನು ವಿಚಾರಣೆಗಾಗಿ ಗುರುವಾರ ವಶಕ್ಕೆ ತೆಗೆದುಕೊಂಡು ಶುಕ್ರವಾರ ಬಂಧಿಸಿಲಾಗಿದೆ. ಮತ್ತು ಖಚಿತ ಮಾಹಿತಿ ಮೇರೆಗೆ ಹೊಸನಗರದಲ್ಲಿದ್ದ ಆರೋಪಿಗಳಾದ ಕೊಡವೂರು ನಿವಾಸಿ ಮಹೇಶ್ ಗಾಣಿಗ ( 38), ಕೊಡವೂರು ಲಕ್ಷ್ಮೀ ನಗರ ನಿವಾಸಿ ರವಿಚಂದ್ರ ಪೂಜಾರಿ (28), ಕೋಟ ಮಣೂರು ನಿವಾಸಿ ಹರೀಶ್ ರೆಡ್ಡಿ(40) ಎಂಬವವರನ್ನು ಬಂಧಿಸಲಾಗಿದೆ ಎಂದು ಉಡುಪಿ ಎಸ್ ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಗುರುವಾರ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ರಾಜಶೇಖರ ರೆಡ್ಡಿ, ಜಿ ರವಿ ಯಾನೆ ಮೆಡಿಕಲ್ ರವಿ ಅವರನ್ನು ಮಡಿಕೇರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಆರಕ್ಕೇರಿದೆ. ಉಳಿದ ಆರೋಪಿಗಳ ಶೋಧ ಕಾರ್ಯ ಮುಂದುವರೆದಿದೆ.

ರೌಡಿಶೀಟರ್ ಹರೀಶ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ, ರಾಘವೇಂದ್ರ ಕಾಂಚನ್ ಬಂಧನದಿಂದ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ. ಈ ಮೂವರು ಆರೋಪಿಗಳನ್ನು ಶಿವಮೊಗ್ಗದ ಹೊಸನಗರದಿಂದ ವಶಕ್ಕೆ ಪಡೆದರೆ ರಾಘವೇಂದ್ರ ಕಾಂಚನ್ ಅವರನ್ನು ಅವರ ಬಾರಿಕೆರೆ ಮನೆಯಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗುರುವಾರ ಪೊಲೀಸರು ರಾಜಶೇಖರ ರೆಡ್ಡಿ ಮತ್ತು ರವಿಯನ್ನು ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ರಾಘವೇಂದ್ರ ಕಾಂಚನ್ ಮತ್ತೂ ಕೊಲೆಯಾದ ಭರತ್ ಗೆ ವೈಷ್ಯಮ್ಯವಿದ್ದು ಭರತ್ ಬೆಳವಣಿಗೆಯನ್ನು ರಾಘವೇಂದ್ರ ಸಹಿಸಿರಲಿಲ್ಲ ಹಾಗಾಗಿ ಸಂಚು ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.