ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಿರಂತರ ನಿಗಾ ವಹಿಸಲು ಸಿಇಓ ಸೂಚನೆ

Spread the love

ಕೌಟುಂಬಿಕ ದೌರ್ಜನ್ಯ ಪ್ರಕರಣಗಳ ನಿರಂತರ ನಿಗಾ ವಹಿಸಲು ಸಿಇಓ ಸೂಚನೆ

ಮಂಗಳೂರು: ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ನ್ಯಾಯ ದೊರಕಿಸಲು ಕ್ರಮ ವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಸೂಚಿಸಿದ್ದಾರೆ.

ಅವರು ಮಂಗಳವಾರ ನೇತ್ರಾವತಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 170 ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಸಾಂತ್ವನ ಕೇಂದ್ರಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸಿ, ಸಂತ್ರಸ್ತರಿಗೆ ಸೂಕ್ತ ನ್ಯಾಯ ದೊರಕಿಸಬೇಕು. ನ್ಯಾಯಾಲಯಗಳಲ್ಲಿ ದಾಖಲಿಸಲಾದ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಸೂಕ್ತ ಕಾನೂನು ನೆರವು ನೀಡಲು ಇಲಾಖೆ ಒತ್ತು ನೀಡಬೇಕು. ಪ್ರಕರಣದ ವಿಚಾರಣಾ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಅವರು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ವರದಕ್ಷಿಣೆ ನಿಷೇಧ ಕಾಯಿದೆಯಡಿ 36 ಪ್ರಕರಣ ದಾಖಲಾಗಿದ್ದು, ಈ ಪೈಕಿ 30 ಪ್ರಕರಣ ತನಿಖಾ ಹಂತದಲ್ಲಿದೆ. ದಾಖಲಾದ ಪ್ರಕರಣಗಳಲ್ಲಿ ತ್ವರಿತ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸ್ತ್ರೀಶಕ್ತಿ ಗುಂಪುಗಳು ತಯಾರಿಸಿದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಅವುಗಳಿಗೆ ಆಹಾರ ಸುರಕ್ಷತೆ ಪ್ರಮಾಣಪತ್ರ ನೀಡಿ, ಉತ್ತಮ ಪ್ಯಾಕಿಂಗ್ ಮತ್ತು ಬ್ರಾಂಡಿಂಗ್ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಲ ನೀಡುವುದಕ್ಕಿಂತಲೂ ಉತ್ಪಾದನಾ ಚಟುವಟಿಕೆಗಳಿಗೆ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ತೊಡಗಿಸಿಕೊಳ್ಳಲು ಆದ್ಯತೆ ನೀಡಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.

ಕದ್ರಿಪಾರ್ಕ್ ಪುಟಾಣಿ ರೈಲು
ನಗರದ ಕದ್ರಿ ಪಾರ್ಕ್‍ನಲ್ಲಿರುವ ಪುಟಾಣಿ ರೈಲನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ವಹಿಸುತ್ತಿದೆ. ಆದರೆ, ರೈಲಿನಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದ ಕಾರಣ ಕಳೆದ ಕೆಲವು ತಿಂಗಳಿನಿಂದ ಸಂಚಾರ ಸ್ಥಗಿತಗೊಂಡಿದೆ. ನಂತರ ಟೆಂಡರ್ ಕರೆದು ರೈಲನ್ನು ದುರಸ್ತಿಗೊಳಿಸಲಾಗಿದ್ದು, ಪ್ರಸ್ತುತ ರೈಲು ಚಲಿಸಲು ಯೋಗ್ಯವಾಗಿದೆ. ರೈಲ್ವೇ ಇಲಾಖೆ ಸುರಕ್ಷತಾ ಪ್ರಮಾಣಪತ್ರ ನೀಡಿದ ನಂತರ ಪುಟಾಣಿ ರೈಲು ಸಂಚಾರ ಪುನರಾರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯ ಪಾಲಕ್ಕಾಡ್ ವಿಭಾಗಕ್ಕೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಪ್ರಮಾಣಪತ್ರ ದೊರಕುವ ಸಾಧ್ಯತೆ ಇದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ಧರ್ಮಪ್ಪ, ವಿವಿಧ ಇಲಾಖೆ ಅಧಿಕಾರಿಗಳು, ಡಾ. ಹಿಲ್ಡಾ ರಾಯಪ್ಪನ್, ಸಾಂತ್ವನ ಕೇಂದ್ರಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love