ಕ್ರೀಡಾಂಗಣ ಕಾವಲುಗಾರ ಇನ್ನೂ ಉಡುಪಿ ಜಿ.ಪಂ ಅಧ್ಯಕ್ಷ

Spread the love

ಉಡುಪಿ: ಜಿಲ್ಲಾ ಪಂಚಾಯತಿ ಚುನಾವಣೆ ನಡೆದು ಒಂದು ತಿಂಗಳ ಬಳಿಕ ಸರಕಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ಪ್ರಕಟಿಸಿದ್ದು, ಉಡುಪಿ ಜಿಲ್ಲಾ ಪಂಚಾಯತಿನ ಅಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

16-Udyavara-Z.PDinakar

ಉಡುಪಿ ಜಿಲ್ಲಾ ಪಂಚಾಯತಿಯ 26 ಸ್ಥಾನಗಳಲ್ಲಿ ಬಿಜೆಪಿ 20 ಸ್ಥಾನಗಳನ್ನು ಪಡೆದು ಜಯಭೇರಿ ಬಾರಿಸಿದ್ದು ಮೀಸಲಾತಿಯ ಪ್ರಕಾರ ಅಧ್ಯಕ್ಷ ಹುದ್ದೆ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಸದಸ್ಯ ಉದ್ಯಾವರ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ದಿನಕರ್ ಅವರಿಗೆ ಖಚಿತವಾಗಿದೆ.
ದಿನಕರ್ ಅವರು ಉಡುಪಿ ನಗರದ ಕನ್ನರ್ಪಾಡಿಯ ನಿವಾಸಿಯಾಗಿದ್ದು, ಪಿಯುಸಿ ತನಕ ಶಿಕ್ಷಣವನ್ನು ಹೊಂದಿದ್ದಾರೆ. ಬಡಕುಟುಂಬದಲ್ಲಿ ಜನಿಸಿದ ದಿನಕರ್ ಅವರು ಪಿಯುಸಿ ಬಳಿಕ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ದುಡಿಮೆಗೆ ಹೋಗಲು ಆರಂಭಿಸಿದರು. ಸತತ 10 ವರ್ಷಗಳ ಕಾಲ ಅವರು ಉಡುಪಿ ಜಿಲ್ಲಾ ಕ್ರೀಡಾಂಗಣದ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೆ ಜಿಲ್ಲಾ ಪಂಚಾಯತಿಯ ಹಾಲಿ ಯೋಜನಾ ನಿರ್ದೇಶಕರ ಕಾರು ಚಾಲಕರಾಗಿ ಕೂಡ ಸೇವೆ ಸಲ್ಲಿಸಿದ ದಿನಕರ್ ಅವರು ಈಗಾ ಇಡೀ ಜಿಲ್ಲಾ ಪಂಚಾಯತಿಯನ್ನು ಮುನ್ನಡೆಸುವ ಬಹುದೊಡ್ಡ ಹೊಣೆಯನ್ನು ಹೊರಲಿದ್ದಾರೆ.
ಕಳೆದ 20 ವರ್ಷಗಳಿಂದ ಬಿಜೆಪಿಯ ಕಾರ್ಯಕರ್ತನಾಗಿ ದುಡಿದ ದಿನಕರ್ ಅವರಿಗೆ ಪಕ್ಷಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಉದ್ಯಾವರ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶವನ್ನು ಪಕ್ಷ ನೀಡಿದ್ದು, 615 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಇವರಿಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ವರವಾಗಿ ಪರಿಣಮಿಸಿದೆ.
ಇನ್ನೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿರುವುದರಿಂದ ಪಕ್ಷದಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಹತ್ತು ಮಂದಿ ಮಹಿಳಾ ಸದಸ್ಯರು ಬಿಜೆಪಿಯಿಂದ ಗೆದ್ದಿದ್ದು ಎಲ್ಲಾ ಹತ್ತು ಮಂದಿ ಕೂಡ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ..
ಹಿರಿತನದ ಆಧಾರದ ಮೇಲೆ ನೋಡಿದರೆ ಕುರ್ಕಾಲು ಕ್ಷೇತ್ರದ ಕ್ಷೇತ್ರದಿಂದ ಆಯ್ಕೆಯಾಗಿರುವ ಗೀತಾಂಜಲಿ ಸುವರ್ಣ ಹಾಗೂ ಬ್ರಹ್ಮಾವರ ಕ್ಷೇತ್ರದಿಂದ ಗೆದ್ದಿರುವ ಶೀಲಾ ಕೆ. ಶೆಟ್ಟಿ ಅವರ ಮಧ್ಯೆಯೇ ಪೈಪೋಟಿ ನಡೆಯುವ ಸಾಧ್ಯತೆ ಇದೆ.

ಗೀತಾಂಜಲಿ ಅವರು ಎರಡು ಬಾರಿ ಗೆದ್ದಿರುವ ಏಕೈಕ ಬಿಜೆಪಿ ಸದಸ್ಯೆಯಾಗಿದ್ದಾರೆ. ಸಚಿವ ವಿನಯ ಕುಮಾರ್‌ ಅವರ ಕಾಪು ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರ್ಕಾಲಿನಲ್ಲಿ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸರಸು ಡಿ ಬಂಗೇರ ಅವರ ವಿರುದ್ಧ ಗೆಲುವು ಸಾಧಿಸುವ ಮೂಲಕ ಅವರು ಸಾಮರ್ಥ್ಯ ಪ್ರದರ್ಶಿಸಿದ್ದರು. ಕಳೆದ 9 ವರ್ಷಗಳಿಂದ ಬಿಜೆಪಿಯಲ್ಲಿರುವ ಗೀತಾಂಜಲಿ ಅವರು ಜೆಡಿಎಸ್‌ನಿಂದ ವಲಸೆ ಬಂದವರು.

ಸುಮಾರು 30 ವರ್ಷಗಳಿಂದ ಬಿಜೆಪಿಯಲ್ಲಿರುವ ಶೀಲಾ ಕೆ ಶೆಟ್ಟಿ ಅವರು ಉಪಾಧ್ಯಕ್ಷೆ ಸ್ಥಾನದ ರೇಸ್‌ನಲ್ಲಿ ಇದ್ದಾರೆ. ಮೂರು ಬಾರಿ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅವರು ಈ ಬಾರಿ ಗೆದ್ದಿದ್ದಾರೆ. ಪಕ್ಷದ ಹಿರಿಯ ನಾಯಕಿ ಎಂಬ ಹೆಗ್ಗಳಿಕೆ ಅವರ ಪಾಲಿಗಿದೆ. ಜಾತಿ ಆಧಾರದ ಮೇಲೆ ನೋಡಿದರೆ ಇಬ್ಬರು ಪ್ರಬಲ ಬಂಟ ಹಾಗೂ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಸದಸ್ಯತ್ವ ಹಿರಿತನ ಅಥವಾ ಸೇವಾ ಹಿರಿತನ, ಬಂಟ ಅಥವಾ ಬಿಲ್ಲವ ಇವೆರಡರಲ್ಲಿ ಪಕ್ಷ ಯಾವುದಕ್ಕೆ ಮಣೆ ಹಾಕಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಉಳಿದಂತೆ ತ್ರಾಸಿ ಕ್ಷೇತ್ರದಿಂದ ಜಿ. ಶೋಭಾ, ಕೋಟೇಶ್ವರದಿಂದ ಲಕ್ಷ್ಮೀ ಮಂಜು, ಬೀಜಾಡಿಯಿಂದ ಶ್ರೀಲತಾ ಸುರೇಶ್‌, ಹಾಲಾಡಿಯಿಂದ ಸುಪ್ರಿತಾ ಕುಲಾಲ್‌, ಎಲ್ಲೂರಿನಿಂದ ಶಿಲ್ಪಾ ಜಿ ಸುವರ್ಣ, ಹೆಬ್ರಿಯಿಂದ ಜ್ಯೋತಿ ಹರೀಶ್‌, ಬೆಳ್ಮಣ್‌ ಕ್ಷೇತ್ರದಿಂದ ಜಯ ಗಳಿಸಿರುವ ರೇಷ್ಮಾ, ಮಿಯಾರು ಕ್ಷೇತ್ರದಿಂದ ಗೆದ್ದಿರುವ ದಿವ್ಯಶ್ರೀ ಜಿ ಅಮೀನ್‌ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹರಿದ್ದು ಕೊನೆಗೆ ಪಕ್ಷ ಯಾರಿಗೆ ಅವಕಾಶ ನೀಡಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.


Spread the love